ಬೆಂಗಳೂರು : ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆಸಲು ಆದೇಶ ಹೊರಡಿಸಿದ ಹಿಂದಿನ ಬಿಜೆಪಿ ಸರ್ಕಾರದ ಆದೇಶವನ್ನು ಶುಕ್ರವಾರ ಹೈಕೋರ್ಟ್ ಎತ್ತಿ ಹಿಡಿದಿದ್ದು, ಸ್ವತಂತ್ರ ಸಂಸ್ಥೆಯ ಮೂಲಕ ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
545 ಪಿಎಸ್‌ಐ ಹುದ್ದೆಗೆ ನೇಮಕಾತಿ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ನೇಮಕಾತಿ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲು ಹೈ ಅವಕಾಶ ನೀಡಿದೆ. ನೇಮಕಾತಿಯಲ್ಲಿ ಅಕ್ರಮ ನಡೆಯದಂತೆ ತೆಡಯಲು ಸ್ವತಂತ್ರ ಏಜೆನ್ಸಿಯ ಮೂಲಕ ಹೊಸದಾಗಿ ಪರೀಕ್ಷೆ ನಡೆಸಬೇಕು ಎಂದು ಹೈಕೋರ್ಟ್ ಇದೇ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದೆ.
ರಾಜ್ಯ ಸರ್ಕಾರ ಏಪ್ರಿಲ್ 29, 2022ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 28, 2022 ರಂದು ನ್ಯಾಯಾಲಯವು ಅರ್ಜಿದಾರರ ವಿಚಾರಣೆಯ ನಂತರ ಏಪ್ರಿಲ್ 29, 2022 ರ ಆದೇಶದ ಅನ್ವಯ ಲಿಖಿತ ಪರೀಕ್ಷೆಯನ್ನು ನಡೆಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.ಏಪ್ರಿಲ್ 10, 2023 ರ ಆದೇಶವನ್ನು ಅನುಸರಿಸಿ, ಪೊಲೀಸ್ ವರಿಷ್ಠಾಧಿಕಾರಿ, ಹಣಕಾಸು ಗುಪ್ತಚರ ಘಟಕ, ಸಿಐಡಿ, ಬೆಂಗಳೂರು, ಅದರ ಡಿಟೆಕ್ಟಿವ್ ಇನ್ಸ್‌ಪೆಕ್ಟರ್ ಶಿವಪ್ರಸಾದ್ ಅವರು ನ್ಯಾಯಾಲಯಕ್ಕೆ ಮುಚ್ಚಿದ ಕವರ್‌ನಲ್ಲಿ ವರದಿಯನ್ನು ಸಲ್ಲಿಸಿದ್ದರು.
ಪಿಎಸ್‌ಐ ನೇಮಕಾತಿಯ ಹಗರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮರು ಪರೀಕ್ಷೆ ನಡೆಸಲು ಉದ್ದೇಶಿಸಿರುವ ತೀರ್ಮಾನದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು ಎಂದು ಪೀಠವು ಆಗಸ್ಟ್ 4ರ ವಿಚಾರಣೆಯಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಹೊರತುಪಡಿಸಿ ಉಳಿದವರಿಗೆ ವಿಶೇಷ ಪರೀಕ್ಷೆ ನಡೆಸಲು ಏಕೆ ಸಾಧ್ಯವಿಲ್ಲ ಎಂಬುದಕ್ಕೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರ್ಕಾರವು ಪೀಠಕ್ಕೆ ಸಲ್ಲಿಸಿತ್ತು.
ಪಿಎಸ್ ಐ ನೇಮಕಾತಿ ಅಕ್ರಮ: ಪೊಲೀಸ್ ಇಲಾಖೆಯಲ್ಲಿ 545 ಪಿಎಸ್‌ಐಗಳ ನೇಮಕಾತಿಗಾಗಿ ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಮಾಡಲಾಗಿತ್ತು. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿದೆ.
ಈ 52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಸೇರಿದಂತೆ ಹಲವು ಆರೋಪಿಗಳನ್ನು ಸಿಐಡಿ ಬಂಧಿಸಿತ್ತು. ಅಮೃತ್ ಪಾಲ್ ಅವರನ್ನು ಜುಲೈ 4, 2022 ರಂದು ಸಿಐಡಿ ಬಂಧಿಸಿತ್ತು.