ನವದೆಹಲಿ – ಜಾಗತಿಕವಾಗಿ ಕೋಲಾಹಲ ಎಬ್ಬಿಸಿದ ಅದಾನಿ ಷೇರು ಮೌಲ್ಯ ಹೆಚ್ಚಳ ಹಾಗೂ ಆರ್ಥಿಕ ಅವ್ಯವಹಾರಗಳ ಕುರಿತು ಸೋಟಕ ವರದಿ ಪ್ರಕಟಿಸಿದ್ದ ಅಮೆರಿಕಾ ಮೂಲದ ಹಿಡನ್ಸ್ ಬರ್ಗ್, ಶೀಘ್ರವೇ ಮತ್ತೊಂದು ವರದಿಯನ್ನು ಪ್ರಕಟಿಸುವುದಾಗಿ ಪೋಸ್ಟ್ ಮಾಡುವ ಮೂಲಕ ಸಂಚಲನ ಮೂಡಿಸಿದೆ.
ತನ್ನ ಟ್ವೀಟರ್ ಖಾತೆಯಲ್ಲಿ ಹಿಡನ್ಸ್ ಬರ್ಗ್‍ನ ಹೊಸ ಪೋಸ್ಟ್ ಕಾರ್ಪೋರೇಟ್ ವಲಯದಲ್ಲಿ ಬೇಸಿಗೆಯಲ್ಲೂ ಚಳಿ ಹುಟ್ಟಿಸಿದೆ. ಕಳೆದ ಜನವರಿಯಲ್ಲಿ ಭಾರತೀಯ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ದಾಖಲೆ ಸಹಿತ ವರದಿ ಪ್ರಕಟಿಸಿತ್ತು. ಅದಕ್ಕೆ ಸ್ಪಷ್ಟ ಉತ್ತರ ನೀಡಲಾಗದೆ ಎರಡು ತಿಂಗಳು ಕಳೆದರೂ ಅದಾನಿ ಗ್ರೂಪ್ ಪರದಾಡುತ್ತಿದೆ. ಅದರ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿ ಕುಸಿದು ಹೋಗಿದೆ. ಅದರಲ್ಲಿ ಹೂಡಿಕೆ ಮಾಡಿದ್ದ ಷೇರುದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಸರ್ಕಾರಿ ಸ್ವಾಮ್ಯದ ಎಲ್‍ಐಸಿ ಆತಂಕದಲ್ಲಿದೆ, ಸಾಲ ನೀಡಿದ್ದ ಎಸ್‍ಬಿಐ ಬಿಸಿ ಬಾಣಲೆಯ ಮೇಲೆ ಕುಳಿತಂತೆ ಚಡಪಡಿಸುತ್ತಿದೆ.
ವಿರೋಧ ಪಕ್ಷಗಳು ಅದಾನಿ ಗೂಪ್‍ನ ಅಧ್ಯಕ್ಷ ಗೌತಮ್ ಅದಾನಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಂಟನ್ನು ಪ್ರಶ್ನಿಸುತ್ತಿವೆ. ಷೇರು ಮೌಲ್ಯ ಹೆಚ್ಚಳ ಹಾಗೂ ಆರ್ಥಿಕ ಅಪರಾಧಗಳನ್ನು ಸಂಸತ್‍ನ ಜಂಟಿ ಸದನ ಸಮಿತಿಯ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿವೆ. ಈ ಕಾರಣಕ್ಕಾಗಿ ಬಜೆಟ್ ಅವೇಶನದಲ್ಲಿ ಕಲಾಪ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಪ್ರಸ್ತುತ ನಡೆಯುತ್ತಿರುವ ಮುಂದುವರೆದ ಬಜೆಟ್ ಅವೇಶದಲ್ಲೂ ಎಂಟು ದಿನ ಕಳೆದರೂ ಯಾವುದೇ ಚರ್ಚೆ ಇಲ್ಲದೆ ಗದ್ದಲ ಕೋಲಾಹಲದಿಂದಾಗಿ ಕಲಾಪದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲಾಗದೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ಜನರ ಗಮನ ಬೇರೆಡೆ ಸೆಳೆಯುವ ಯತ್ನ ನಡೆಸುತ್ತಿವೆ.
ವಿಶ್ವದಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನ, ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅಷ್ಟೈಶ್ವರ್ಯಗಳು ಏಕಾಏಕಿ ಕುಸಿದು ಹೋಗಿವೆ. ಶ್ರೀಮಂತರ ಪಟ್ಟಿಯಲ್ಲಿ ನೂರಕ್ಕಿಂತಲ್ಲೂ ಕೆಳಗಿನ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.
ಈ ನಡುವೆ ಹಿಡನ್ಸ್ ಬರ್ಗ್ ಅಮೆರಿಕಾ ಸಂಸ್ಥೆಯಾಗಿದ್ದು, ಭಾರತೀಯ ಉದ್ಯಮಿಗಳ ವಿರುದ್ಧ ಸಂಚು ನಡೆಸುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ಈಗ ಮತ್ತೊಂದು ವರದಿಯ ಬೆದರಿಕೆ ಹಾಕಿರುವ ಹಿಡನ್ಸ್ ಬರ್ಗ್ ಸಂಚಲನವನ್ನೇ ಸೃಷ್ಟಿಸಿದೆ. ಷೇರು ಮಾರುಕಟ್ಟೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.