Mysore
29
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಮಾಸ್‌ ವಾಯುಪಡೆ ಮುಖ್ಯಸ್ಥ ಮುರಾದ್ ಅಬು ಹತ್ಯೆ!

ಟೆಲ್ ಅವಿವ್ (ಇಸ್ರೇಲ್): ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್​ ನಡುವೆ ಸಂಘರ್ಷ ತೀವ್ರಗೊಂಡಿದ್ದು, ರಾತ್ರಿಯಿಡೀ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಸಂಘಟನೆಯ ವಾಯುಪಡೆಯ ಮುಖ್ಯಸ್ಥ ಅಬು ಮುರಾದ್‌ ಹತ್ಯೆಯಾಗಿರುವುದಾಗಿ ತಿಳಿದುಬಂದಿದೆ.

ಶನಿವಾರ ನಡೆದ ಹತ್ಯಾಕಾಂಡದ ಸಮಯದಲ್ಲಿ ಭಯೋತ್ಪಾದಕರಿಗೆ ನಿರ್ದೇಶನ ನೀಡುವಲ್ಲಿ ಅಬು ಮುರಾದ್‌ ಹೆಚ್ಚು ಹೊಣೆಗಾರನಾಗಿದ್ದ. ಕಳೆದ ರಾತ್ರಿ ಇಸ್ರೇಲ್​ ವಾಯುಪಡೆಯ ಫೈಟರ್ ಜೆಟ್‌ಗಳು ಗಾಜಾ ಪಟ್ಟಿಯಾದ್ಯಂತ ವ್ಯಾಪಕವಾದ ದಾಳಿಗಳನ್ನು ನಡೆಸಿದ್ದು, ಈ ದಾಳಿಯಲ್ಲಿ ಅಬು ಮುರಾದ್‌ ಹತ್ಯೆಯಾಗಿದ್ದಾನೆಂದು ಇಸ್ರೇಲ್ ಹೇಳಿದೆ.

ಈ ಕುರಿತು ಇಸ್ರೇಲ್ ವಾಯುಪಡೆ ಸಾಮಾಜಿಕ ಜಾಲತಾಣ ‘ಎಕ್ಸ್​’ನಲ್ಲಿ ಪೋಸ್ಟ್ ಮಾಡಿದೆ. ಹಮಾಸ್‌ ಭಯೋತ್ಪಾದನಾ ತಾಣಗಳು ಮತ್ತು ಗಾಜಾ ಪಟ್ಟಿಯಲ್ಲಿರುವ ನುಖ್ಬಾ ಭಯೋತ್ಪಾದಕ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಅಬು ಮುರಾದ್ ಹತ್ಯೆಯಾಗಿದ್ದಾನೆಂದು ಹೇಳಿದ್ದಾರೆ.

ವಾಯುಪಡೆಯ ಫೈಟರ್ ಜೆಟ್‌ಗಳು ಭಯೋತ್ಪಾದಕ ಸಂಘಟನೆ ಹಮಾಸ್‌ನ ಕಾರ್ಯಾಚರಣೆಯ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದವು. ಅಲ್ಲಿಂದಲೇ ಈ ಸಂಘಟನೆಯು ತನ್ನ ವೈಮಾನಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಿತ್ತು. ಈ ದಾಳಿಯ ಸಮಯದಲ್ಲಿ ಗಾಜಾ ನಗರದ ವಾಯು ಪಡೆಯ ಮುಖ್ಯಸ್ಥ ಮುರಾದ್ ಅಬು ಮುರಾದ್ ಕೊಲೆಯಾಗಿದ್ದಾರೆ. ಈತ ಶನಿವಾರ ನಡೆದ ಹತ್ಯಾಕಾಂಡದ ದಾಳಿಯಲ್ಲಿ ಭಯೋತ್ಪಾದಕರಿಗೆ ನಿರ್ದೇಶಿಸಿದ್ದ ಎಂದು ತಿಳಿಸಿದೆ.

ಇಷ್ಟೇ ಅಲ್ಲ, ”ಸ್ವಲ್ಪ ಸಮಯದ ಹಿಂದೆ ಇಸ್ರೇಲ್​ ರಕ್ಷಣಾ ಪಡೆಯ ಸೈನಿಕರು ಲೆಬನಾನ್‌ನಿಂದ ಇಸ್ರೇಲಿ ಭೂಪ್ರದೇಶಕ್ಕೆ ನುಸುಳಲು ಯತ್ನಿಸಿದ ಭಯೋತ್ಪಾದಕ ಕೋಶ ಗುರುತಿಸಿದ್ದಾರೆ. ವಾಯುಪಡೆಯು ಮಾನವರಹಿತ ವೈಮಾನಿಕ ವಾಹನದ ಮೂಲಕ ಈ ಭಯೋತ್ಪಾದಕ ಕೋಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ, ಹಲವಾರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಮಾಹಿತಿ ನೀಡಿದೆ.

ಮತ್ತೊಂದೆಡೆ, ರಾತ್ರಿಯಿಡೀ ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಇಸ್ರೇಲ್​ ವಾಯುಪಡೆಗಳು ಹಮಾಸ್‌ನ ಕಮಾಂಡೋ ಪಡೆಗಳಿಗೆ ಸೇರಿದ ಡಜನ್‌ಗಟ್ಟಲೆ ಸ್ಥಳಗಳನ್ನು ನಾಶ ಮಾಡಿದೆ. ಈ ಪ್ರದೇಶಗಳು ಅಕ್ಟೋಬರ್ 7ರಂದು ಇಸ್ರೇಲ್‌ಗೆ ಒಳನುಸುಳುವಿಕೆಗೆ ಕಾರಣವಾಗಿದ್ದವು ಎಂದು ವರದಿಗಳು ತಿಳಿಸಿವೆ.

ಇಸ್ರೇಲ್ ಹಾಗೂ ಹಮಾಸ್ ಸಂಘರ್ಷದ ಮಧ್ಯೆ ಇಸ್ರೇಲ್​ ಸೇನೆಯು ಗಾಜಾ ನಗರದಿಂದ ಎಲ್ಲ ನಾಗರಿಕರಿಗೆ ಸ್ಥಳಾಂತರವಾಗುವಂತೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಗಾಜಾ ಪಟ್ಟಿಯಲ್ಲಿರುವ ಜನರು ವಲಸೆ ಹೋಗುತ್ತಿದ್ದಾರೆ ಎಂದು ಇಸ್ರೇಲ್​ ರಕ್ಷಣಾ ಪಡೆಗಳ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಜೊನಾಥನ್ ಕಾನ್ರಿಕಸ್ ಹೇಳಿದ್ದರು.

ನಾವು ದಕ್ಷಿಣದ ಕಡೆಗೆ ಪ್ಯಾಲೇಸ್ಟಿನಿಯನ್ ನಾಗರಿಕರ ಗಮನಾರ್ಹ ವಲಸೆಯನ್ನು ಗಮನಿಸುತ್ತಿದ್ದೇವೆ. ನಮ್ಮ ಎಚ್ಚರಿಕೆಯನ್ನು ಜನರು ಆಲಿಸಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಪಾಯಕಾರಿ ಪ್ರದೇಶದಿಂದ ಹೊರಬರುತ್ತಿದ್ದಾರೆ ಎಂದು ಕಾನ್ರಿಕಸ್ ತಿಳಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!