ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳ ಪೈಕಿ ಮೂರು ಯೋಜನೆಗಳ ಈಗಾಗಲೇ ಜಾರಿಯಲ್ಲಿದೆ. ನಾಲ್ಕನೇ ಯೋಜನೆ ಗೃಹಲಕ್ಷೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಯೋಜನೆಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ದೊರಕಿದೆ. ಮೂರು ದಿನದಲ್ಲಿ ರಾಜ್ಯಾದ್ಯಂತ ಒಟ್ಟಾರೆ 22.90,782 ಮಹಿಳಯರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಮೊದಲ ದಿನ ಅಂದರೆ ಜುಲೈ 19ರಂದು ಕೇವಲ 60,000 ಮಹಿಳೆಯರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದರೆ, ಎರಡನೇ ದಿನವಾದ ಶುಕ್ರವಾರ (ಜುಲೈ 21) 7.77 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ನಿನ್ನೆ (ಜುಲೈ 22) ಮೂರನೇ ದಿನವಾದ ಶನಿವಾರ ಗೃಹಲಕ್ಷ್ಮೀ ಯೋಜನೆಗೆ ಬರೋಬ್ಬರಿ 14,16,462 ಮನೆ ಒಡತಿಯರು ಅರ್ಜಿ ಹಾಕಿದ್ದಾರೆ.
ಈ ಮೂಲಕ ಮೂರು ದಿನದಲ್ಲಿ ಒಟ್ಟಾರೆ 22.90,782 ಮಹಿಳಯರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಭಾನುವಾರ ಆಗಿರುವುದರಿಂದ ಗೃಹಲಕ್ಷ್ಮಿ ಅರ್ಜಿ ನೋಂದಣಿ ಇಲ್ಲ ಇರುವುದಿಲ್ಲ.
ಯೋಜನೆಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ದೊರಕಿದ್ದು, ಇನ್ನೂ ಲಕ್ಷಾಂತರ ಮಹಿಳೆಯರು ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕಾಯುತ್ತಿದ್ದಾರೆ. ಆದ್ರೆ, ಆರಂಭದಿಂದಲೇ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಒನ್, ಗ್ರಾಮ ಒನ್ , ಕರ್ನಾಟಕ ಒನ್ ಸೆಂಟರ್ ಗಳಲ್ಲಿ ಸರ್ವರ್ ಬ್ಯುಸಿ ಬರುತ್ತಿದೆ. ಒಟ್ಟು 1.20 ಕೋಟಿ ಗೃಹಿಣಿಯರು ಈ ಯೋಜನೆಯ ಫಲಾನುಭವಿಗಳಿದ್ದು, ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಆಗಸ್ಟ್ 16ರಂದು 2000 ರೂಪಾಯಿ ಹಣವನ್ನು ಸರ್ಕಾರ ಜಮಾ ಮಾಡಲಿದೆ.
ಪಡಿತರ ಕಾರ್ಡ್ ಸಂಖ್ಯೆ, ಯಜಮಾನಿ ಮತ್ತು ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿದ್ದು, ಫಲಾನುಭವಿಗಳು 8147500500 ಸಂಖ್ಯೆಗೆ ರೇಷನ್ ಕಾರ್ಡ್ ನಂಬರ್ ಹಾಕಿ ಎಸ್ ಎಂಎಸ್ ಮೂಲಕ ಸಂದೇಶ ಕಳುಹಿಸಬೇಕು. ಬಳಿಕ ಯಾವಾಗ ಅರ್ಜಿಸಲ್ಲಿಸಬೇಕು? ಎಲ್ಲಿ ಎನ್ನುವ ಮಾಹಿತಿ ಬರುತ್ತದೆ. ನಂತರ ಅದೇ ಪ್ರಕಾರ ಹೋಗಿ ನೊಂದಣಿ ಮಾಡಿಕೊಳ್ಳಬೇಕು. ಆದ್ರೆ, ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ 81475 00500 ಸಂಖ್ಯೆಗೆ ಮೆಸೇಜ್ ಮಾಡಬೇಕು ಎಂಬ ಮಾಹಿತಿ ಅರಿತು, ಅದರಂತೆ ಮೆಸೇಜ್ ಕಳಿಸಿದರೂ ಸಕಾಲಕ್ಕೆ ರಿಪ್ಲೈ ಬರುತ್ತಿಲ್ಲ ಎನ್ನುವ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಸದ್ಯ ಜಿಲ್ಲೆ ಜಿಲ್ಲೆಗಳಲ್ಲೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ನಡೆಯುತ್ತಿದ್ದು, ಸೇವಾ ಕೇಂದ್ರಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ.