ಹನೂರು: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜರುಗಿದೆ.
ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಹೂಗ್ಯಂ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ನೀರು ಹೊರ ಬರುತ್ತಿರುವ ಹಿನ್ನೆಲೆ ಕೊಳ್ಳೇಗಾಲ ರಾಮಾಪುರ ಮಾರ್ಗದ ರಸ್ತೆ ಬಂದ್ ಆಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ವಾಹನದ ಮೇಲೆ ಬಿದ್ದ ವಿದ್ಯುತ್ ಕಂಬ : ರಾಮಪುರದಿಂದ ಹೂಗ್ಯಂ ಗ್ರಾಮಕ್ಕೆ ತೆರಳುತ್ತಿದ್ದ ಬುಲರೋ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಭಾರಿ ಮಳೆ ಹಿನ್ನೆಲೆ ವಿದ್ಯುತ್ ನಿಲುಗಡೆ ಆಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇದಲ್ಲದೆ ಹೂಗ್ಯಂ ಮುಖ್ಯರಸ್ತೆಯಲ್ಲಿದ್ದ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ಕಗ್ಗತ್ತಲಿನಲ್ಲಿ ರಾತ್ರಿ ಕಳೆಯುವಂತಾಗಿತ್ತು.
ಬಾಳೆ ಕಬ್ಬು ಬೆಳೆ ನಾಶ : ಶನಿವಾರ ಸುರಿದ ಭಾರಿ ಮಳೆಗೆ ಹೂಗ್ಯಂ ಗ್ರಾಮದ ಕಾಂಗ್ರೆಸ್ ಮುಖಂಡ ಎನ್ ಆರ್ ಮಾದೇಶ್ ಅವರಿಗೆ ಸೇರಿದ 1.5 ಎಕರೆ ಬಾಳೆ ಹಾಗೂ ರಂಗಸ್ವಾಮಿ ರವರಿಗೆ ಸೇರಿದ 1ಎಕರೆ ಬಾಳೆ ಬೆಳೆ ನಾಶವಾಗಿದೆ.ಈ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಸಂಚಾರ ಬಂದ್ : ಕಳೆದ 1ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಮ್ಯೂಸಿಯಂ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಹೂಗ್ಯಂ ಗ್ರಾಮದಿಂದ ರಾಮಾಪುರ ಹನೂರು, ಕೊಳ್ಳೇಗಾಲ ಮಲೆಮಹದೇಶ್ವರ ಬೆಟ್ಟ ಹಾಗೂ ರಾಮಪುರದಿಂದ ಜಲ್ಲಿಪಾಳ್ಯ ಮೀಣ್ಯಂ, ದಿನ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ.
ಸತತ ಮೂರನೇ ಬಾರಿಗೆ ಭರ್ತಿಯಾದ ಹೂಗ್ಯಂ ಜಲಾಶಯ : ಕಳೆದೆರಡು ವರ್ಷಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಹೂಗ್ಯಂ ಜಲಾಶಯ 3ನೇ ಬಾರಿಗೆ ಭರ್ತಿಯಾಗಿದ್ದು ರೈತರಲ್ಲಿ ಮಂದಹಾಸ ವನ್ನುಂಟು ಮಾಡಿದೆ.