Mysore
20
overcast clouds
Light
Dark

ಜೆಡಿಎಸ್​ನಿಂದ ಸಿ.ಎಂ.ಇಬ್ರಾಹಿಂ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಿಗೆ ಗೇಟ್​ಪಾಸ್

ಬೆಂಗಳೂರು : ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹಿಂ ಅವರನ್ನು ಅಧಿಕೃತವಾಗಿ ಉಚ್ಚಾಟನೆ ಮಾಡಲಾಗಿದ್ದು, ಇವರೊಂದಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ.ನಾಣು ಅವರನ್ನು ಕೂಡ ಉಚ್ಚಾಟನೆ ಮಾಡಲಾಗಿದೆ ಎಂದು ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಉಚ್ಚಾಟನೆ ಪ್ರಸ್ತಾಪಕ್ಕೆ ಒಮ್ಮತದಿಂದ ಅನುಮೋದನೆ ನೀಡಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಆದರೆ, ತಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ ತನ್ನನ್ನು ಪರಿಗಣಿಸದೆ ದೆಹಲಿಗೆ ತೆರಳಿ ಮೈತ್ರಿ ಮಾತುಕತೆ ನಡೆಸಿದ್ದಾರೆ ಎಂದು ಸಿಎಂ ಇಬ್ರಾಹಿಂ ಆರೋಪಿಸಿದ್ದರು. ಅಲ್ಲದೆ, ಮೈತ್ರಿ ಮಾಡಿಕೊಳ್ಳದಂತೆ ಒತ್ತಡ ಹೇರುತ್ತಲೇ ಇದ್ದರು.

ಅದಾಗ್ಯೂ, ಜೆಡಿಎಸ್​​ ಪಕ್ಷದಿಂದ ಇಬ್ರಾಹಿಂ ಅವರನ್ನು ಅಮಾನತುಗೊಳಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್​​ಡಿ ದೇವೇಗೌಡ ಅವರು ಇತ್ತೀಚೆಗೆ ಆದೇಶಿಸಿದ್ದರು. ಕರ್ನಾಟಕ ರಾಜ್ಯ ಘಟಕದ ಪ್ರಸ್ತುತ ಕಾರ್ಯಕಾರಿ ಸಮಿತಿಯು ಪಕ್ಷದ ಸಂಘಟನೆ ಮತ್ತು ಬಲವರ್ಧನೆ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿರುವುದಿಲ್ಲ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕೈಗೊಂಡಿರುವುದಿಲ್ಲ. ಇದು ಮತ್ತು ಇನ್ನೂ ಕೆಲವು ಕಾರಣಗಳಿಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಆದೇಶದಲ್ಲಿ ತಿಳಿಸಿದ್ದರು.

ಅಲ್ಲದೆ ಪಕ್ಷದ ಹಿತದೃಷ್ಟಿಯಿಂದ ಮತ್ತು ಪಕ್ಷವನ್ನು ಸಂಘಟನೆ ಮಾಡಲು, ಬಲವರ್ಧಿಸಲು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಜತೆ ಮೈತ್ರಿ/ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಈ ಹೊಂದಾಣಿಕ ಬಗ್ಗೆ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಲು ಪಕ್ಷದ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ.

ಈ ವಿಚಾರವಾಗಿ ನಡೆದ ಸಭೆಗಳಲ್ಲಿ ಸಿಎಂ ಇಬ್ರಾಹಿಂ ಅವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಮತ್ತು ತೀರ್ಮಾನದಲ್ಲಿ ಪಾಲುದಾರರಾಗಿದ್ದರು. ತದನಂತರ ಈ ತೀರ್ಮಾನದ ವಿರುದ್ಧ ವಿರೋಧಭಾಸ ಹೇಳಿಕೆ ನೀಡುತ್ತಿರುವುದಾಗಿ ವರದಿಯಾಗಿದೆ. ಈ ಕಾರಣಗಳಿಗಾಗಿ ರಾಜ್ಯಾಧ್ಯಕ್ಷರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಜೆಡಿಎಸ್ ಸಂವಿಧಾನದ ಸೆಕ್ಷನ್ 10ರ ಅನ್ವಯ ನವೆಂಬರ್ 19ರಿಂದ ಅನ್ವಯವಾಗುವಂತೆ ವಿಸರ್ಜನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ದೇವೇಗೌಡರು ತಿಳಿಸಿದ್ದರು.

ಜೆಡಿಎಸ್ ಕಚೇರಿಯಲ್ಲಿ ನಡೆದ ಜಾತ್ಯತೀತ ಜನತಾದಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ನಡೆದಿದ್ದು, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಎಲ್ಲಾ ಸದಸ್ಯರು, ಇತರ ರಾಜ್ಯ ಘಟಕಗಳ ಅಧ್ಯಕ್ಷರು ಭಾಗಿಯಾಗಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ