Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚಂದಾದಾರಿಕೆ ಹೆಸರಿನಲ್ಲಿ ವಂಚನೆ ಗಾಳ : ಇಂಡಿಯನ್ ಮನಿ ಕಂಪನಿ ವಿರುದ್ಧ 6 ಎಫ್‌ಐಆರ್

ಬೆಂಗಳೂರು: ಹಣಕಾಸು ವಿಷಯದಲ್ಲಿ ಸಲಹೆ ನೀಡುವ ಉದ್ದೇಶವಿಟ್ಟುಕೊಂಡಿದ್ದ ‘ಇಂಡಿಯನ್ ಮನಿ ಡಾಟ್ ಕಾಮ್’ಕಂಪನಿ, ಹಲವು ಸಾಧಕರ ಹೆಸರು ಹಾಗೂ ಅವರಿಂದ ತರಬೇತಿ ಕೊಡಿಸುವ ನೆಪದಲ್ಲಿ ಸಾವಿರಾರು ಜನರಿಂದ ‘ಚಂದಾದಾರಿಕೆ’ ಹಣ ಪಡೆದು ವಂಚಿಸಿರುವ ಸಂಗತಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಅರೆಕಾಲಿಕ ಕೆಲಸದ ಹೆಸರಿನಲ್ಲಿ ಯುವಕ– ಯುವತಿಯರನ್ನು ವಂಚಿಸಿರುವ ಪ್ರಕರಣದ ತನಿಖೆ ಕೈಗೊಂಡಿರುವ ಬನಶಂಕರಿ ಠಾಣೆ ಪೊಲೀಸರು, ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿ.ಎಸ್. ಸುಧೀರ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ರಘು ಅವರನ್ನು ಬಂಧಿಸಿದ್ದಾರೆ. ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಪೊಲೀಸರು ತಯಾರಿ ಆರಂಭಿಸಿದ್ದಾರೆ.

ಕಂಪನಿಯ ಆಮಿಷಕ್ಕೆ ಒಳಗಾಗಿ ಕೆಲ ತಿಂಗಳು ಕೆಲಸ ಮಾಡಿ ವಂಚನೆಗೀಡಾಗಿದ್ದ ಯುವಕ–ಯುವತಿಯರು ಬನಶಂಕರಿ ಠಾಣೆಯಲ್ಲಿ ಏಪ್ರಿಲ್ 4ರಂದು ದೂರು ದಾಖಲಿಸಿದ್ದರು. ಬಂಧನ ಭೀತಿಯಲ್ಲಿದ್ದ ಸುಧೀರ್ ಹಾಗೂ ಇತರರು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಇದರ ಮಧ್ಯೆಯೇ ಕಂಪನಿಯ ಕೆಲ ಉದ್ಯೋಗಿಗಳು ಪ್ರತ್ಯೇಕ ದೂರು ನೀಡಿದ್ದಾರೆ. ಇದರನ್ವಯ ಹೊಸದಾಗಿ ಐದು ಎಫ್‌ಐಆರ್‌ ದಾಖಲಾಗಿವೆ. ಈ ಪ್ರಕರಣಗಳಲ್ಲಿ ಸುಧೀರ್ ಹಾಗೂ ರಘು ಬಂಧನವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

‘ಕೆಲಸ ಮಾಡುವ ಉದ್ಯೋಗಿಗಳು ಮಾತ್ರವಲ್ಲದೇ, ಜನರಿಗೂ ಕಂಪನಿಯಿಂದ ವಂಚನೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿಯುತ್ತಿದೆ. ವಂಚನೆ ಉದ್ದೇಶದಿಂದಲೇ ಕಂಪನಿಯವರು ‘ಫ್ರೀಡಂ ಆ್ಯಪ್‌’ ಅಭಿವೃದ್ಧಿಪಡಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕ್ರಮವಾಗಿ 6 ಎಫ್‌ಐಆರ್‌ಗಳು ದಾಖಲಾಗಿದ್ದು, ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆಗಿರುವ ಅನುಮಾನವಿದೆ. ತನಿಖೆ ಹೊಣೆಯನ್ನು ಸಿಸಿಬಿಗೆ ವಹಿಸಲು ಚಿಂತನೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ರೈತರು, ಅಧಿಕಾರಿಗಳ ಹೆಸರು ದುರ್ಬಳಕೆ: ‘ಕೃಷಿಯಲ್ಲಿ ಸಾಧನೆ ಮಾಡಿರುವ ರೈತರು ಹಾಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಧಿಕಾರಿಯಾದವರ ಹೆಸರನ್ನು ಕಂಪನಿ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ’ ಎಂದು ಪೊಲೀಸರು ಹೇಳಿದರು.

‘ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಫೋಟೊ ಹಾಗೂ ಹೆಸರು ಹೇಳಿಕೊಂಡು ಅಮಾಯಕ ಯುವಕರ ದಿಕ್ಕು ತಪ್ಪಿಸಲಾಗಿದೆ. ಚನ್ನಣ್ಣನವರ ರೀತಿಯಲ್ಲಿ ನೀವೂ ಐಪಿಎಸ್ ಅಧಿಕಾರಿಯಾಗಬಹುದೆಂದು ಹೇಳಿ ತರಬೇತಿ ನೆಪದಲ್ಲಿ ಹಣ ಪಡೆದು ವಂಚಿಸಿರುವ ಮಾಹಿತಿ ಇದೆ. ಈ ಬಗ್ಗೆ ಚನ್ನಣ್ಣನವರ ಅವರಿಂದ ಮಾಹಿತಿ ಪಡೆಯಲಾಗುವುದು’ ಎಂದು ತಿಳಿಸಿದರು.

‘ಕೃಷಿಯಲ್ಲಿ ಲಕ್ಷ ಲಕ್ಷ ಗಳಿಸುವುದು ಹೇಗೆ? ಉದ್ಯಮ ಆರಂಭಿಸುವುದು ಹೇಗೆ? ಮನೆಯಲ್ಲೇ ಕುಳಿತು ದುಡಿಯುವುದು ಹೇಗೆ? ಸ್ಪರ್ಧಾತ್ಮಕ ಪರೀಕ್ಷೆ ಸೇರಿ 30ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಆ್ಯಪ್‌ ಮೂಲಕ ಕೋರ್ಸ್ ನಡೆಸಲಾಗುತ್ತಿತ್ತು. ಚಂದಾದಾರಿಕೆ ಹೆಸರಿನಲ್ಲಿ ಜನರಿಂದ ಹಣ ಪಡೆದಿದ್ದ ಕಂಪನಿ, ಯಾವುದೇ ತರಬೇತಿ ನೀಡದೇ ವಂಚಿಸಿರುವ ಬಗ್ಗೆ ಉದ್ಯೋಗಿಗಳೇ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸಾಮಾಜಿಕ ಮಾಧ್ಯಮ ಹಾಗೂ ಇತರೆಡೆ ಜಾಹೀರಾತು ನೀಡಿ, ಜನರನ್ನು ಸೆಳೆಯಲಾಗುತ್ತಿತ್ತು. ನಾನಾ ಆಮಿಷವೊಡ್ಡಿ ಜನರಿಂದ ಹಣ ತುಂಬಿಸಿಕೊಳ್ಳಲಾಗುತ್ತಿತ್ತು. ಕಂಪನಿ ಉದ್ಯೋಗಿಗಳು ಮಾತ್ರ ಈಗ ದೂರು ನೀಡಿದ್ದಾರೆ. ಜನರು ಯಾರಾದರೂ ದೂರು ನೀಡಿದರೆ, ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ