ಹೈದರಾಬಾದ್: ತೆಲಂಗಾಣ ರಾಜ್ಯ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ.
ಜಾರಿ ಬಿದ್ದ ಪರಿಣಾಮ ಮೂಳೆ ಮುರಿದಿದ್ದು, ಚಂದ್ರಶೇಖರ್ ರಾವ್ ತೀವ್ರ ನೋವಿನಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಸದ್ಯ ಸೋಮಾಜಿಗುಡಾದ ಯಶೋಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದು ಕುಟುಂಬಸ್ಥರೆಲ್ಲಾ ಆಸ್ಪತ್ರೆಗೆ ಧಾವಿಸಿದ್ದಾರೆ. ಆಸ್ಪತ್ರೆಯ ಮುಂಭಾಗ ಕೆಸಿಆರ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಯಶೋಧಾ ಆಸ್ಪತ್ರೆಯ 9ನೇ ಮಹಡಿಯಲ್ಲಿ ಕೆಸಿಆರ್ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಕೆಸಿಆರ್ ಆವರ ಸೊಂಟದ ಬಳಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.