Mysore
20
overcast clouds
Light
Dark

ಮಾಜಿ ಸಿಎಂ ಬೊಮ್ಮಾಯಿ ಕಾಂಗ್ರೆಸ್​ ಸೇರುವ ಬಗ್ಗೆ ಯೋಚಿಸಬೇಕು: ಎಂಬಿ ಪಾಟೀಲ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಎರಡು ತಿಂಗಳು ಕಳೆದರೂ ವಿಪಕ್ಷ ನಾಯಕನ ಆಯ್ಕೆ ಮಾತ್ರ ಇನ್ನು ಕಗ್ಗಂಟಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸುತ್ತಿದೆ.

ಇದೇ ವಿಚಾರ ಇಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸ್​ ನಾಯಕರು ಅಧಿವೇಶನದಲ್ಲಿ ಬಿಜೆಪಿ ನಾಯಕರ ಕಾಲೆಳೆಯುತ್ತಿದ್ದಾರೆ. ಈ ವಿಚಾರವಾಗಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್​ ಟ್ವೀಟ್​​ ಮಾಡಿ “ಶೀಘ್ರದಲ್ಲೇ ವಿಪಕ್ಷ ನಾಯಕರಾಗಲಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು. ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್​ ಸೇರುವ ಬಗ್ಗೆ ಯೋಚಿಸಬೇಕು” ಎಂದು ಹೇಳುವ ಮೂಲಕ ತಮ್ಮ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ.

ಎಂ.ಬಿ ಪಾಟೀಲ್​ ಟ್ವೀಟ್​ “ಶೀಘ್ರದಲ್ಲೇ ವಿಪಕ್ಷ ನಾಯಕರಾಗಲಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು. ಅಂತಿಮವಾಗಿ ಬಿಜೆಪಿ ಬಸವರಾಜ ಬೊಮ್ಮಾಯಿಯವರನ್ನು ಮೂಲೆಗುಂಪು ಮಾಡಲು ನಿರ್ಧರಿಸಿದಂತಿದೆ. ಬೊಮ್ಮಾಯಿಯವರಿಗೂ ಸಹ ಬಿಎಸ್​ ಯಡಿಯೂರಪ್ಪ, ಜಗದೀಶ್​ ಶೆಟ್ಟರ್​ ಅವರಿಗೆ ಬಂದಂತಹ ಪರಿಸ್ಥಿತಿಯೇ ಬರಲಿದೆ.

ಬಿಜೆಪಿ ಎಂಬುದು ಕುಸಿಯುತ್ತಿರುವ ಕಾರ್ಡ್​ಗಳ ಮನೆಯಾಗಿದೆ. ಬೊಮ್ಮಾಯಿಯವರು ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಬೇಕು. ಅವರು ಈ ಹಿಂದಿನಂತೆ ಹಾಗೂ ಹಿರಿಯ ಬೊಮ್ಮಾಯಿಯವರಂತೆ (ಎಸ್​ ಆರ್​ ಬೊಮ್ಮಾಯಿ) ಜಾತ್ಯಾತೀತ ಸಿದ್ಧಾಂತಕ್ಕೆ ಮರಳಿದರೆ ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಬಹುದು” ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿಯವರು ಕಾಂಗ್ರೆಸ್​ ಪಕ್ಷದ ಗ್ಯಾರೆಂಟಿ ಯೋಜನೆಯಲ್ಲಿರುವ ಲೋಪದೋಷಗಳನ್ನು ಪ್ರಸ್ತಾಪಿಸಿದರು. ಅಲ್ಲದೇ ನಾಗಮಂಗಲದ ಕೆಎಸ್​ಆರ್​ಟಿಸಿ ಬಸ್​​ ಡ್ರೈವರ್​ ಕಂ ಕಂಡೆಕ್ಟರ್​​ ಆತ್ಮಹತ್ಯೆ ಯತ್ನ ಮತ್ತು ಸಾಕಷ್ಟು ಚರ್ಚೆಯಾದ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಪ್ರಸ್ತಾಪಿಸಿದರು.

ಹೆಚ್​ ಡಿ ಕುಮಾರಸ್ವಾಮಿಯವರು ಸರ್ಕಾರದ ವಿರುದ್ಧ ಒಂದೊಂದೆ ಅಸ್ತ್ರಗಳಿಗೆ ಬಿಜೆಪಿ ನಾಯಕರು ಬೆಂಬಲ ವ್ಯಕ್ತಪಡಿಸಿದರು.

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿವಿಧ ವಿಷಯಗಳಲ್ಲಿ ಪರಸ್ಪರ ಬೆಂಬಲ ವ್ಯಕ್ತಪಡಿಸಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ