ಚಿಕ್ಕಮಗಳೂರು : ಮತ್ಸ್ಯ ಜಾತಿಯಲ್ಲೇ ಅಪರೂಪದ ತಳಿ ಅಂಬೂರು ಸಮುದ್ರ ಮೀನಿಗಾಗಿ ನಗರದಲ್ಲಿ ಮೀನುಪ್ರಿಯರು ಮುಗಿಬಿದ್ದಿದ್ದಾರೆ. ಬರೋಬ್ಬರಿ 340 ಕೆಜಿ ತೂಕದ ಅಂಬೂರು ಸಮುದ್ರದ ಮೀನಿಗೆ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಖರೀದಿಸಿದ್ದಾರೆ.
ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯ ಮೀನು ಮಳಿಗೆಗೆ ಇದೇ ಮೊದಲ ಬಾರಿಗೆ ಮಂಗಳೂರಿನಿಂದ ಬಂದ ಬರೋಬ್ಬರಿ 340 ಕೆಜಿ ತೂಕದ ಅಂಬೂರು ಸಮುದ್ರ ಮೀನು ಕಂಡು ಗ್ರಾಹಕರು ಹಾಗೂ ಸ್ಥಳೀಯರು ಶಾಕ್ ಆಗಿದ್ದಾರೆ.
ಪ್ರತಿ ಕೆಜಿಗೆ 600 ರೂ. ನಿಗದಿ ಮಾಡಿದ್ದ ಅಂಗಡಿ ಮಾಲೀಕ ಗ್ರಾಹಕರ ಬೇಡಿಕೆ ಹೆಚ್ಚಿದಂತೆ 1,000 ರೂ. ನಿಗದಿ ಮಾಡಿದ್ದಾನೆ. ಆದರೂ ಗ್ರಾಹಕರು ನಿರುತ್ಸಾಹಗೊಳ್ಳದೇ ಮುಗಿಬಿದ್ದು ಖರೀದಿಸಿದ್ದಾರೆ. ಗ್ರಾಹಕರನ್ನ ಸಂಭಾಳಿಸಲು ಅಂಗಡಿ ಮಾಲೀಕ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೇ ಮೀನು ಖರೀದಿದಾರರ ಜೊತೆ ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.
ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಿಗೆ ಭಾರತದಿಂದ ರಫ್ತಾಗುತ್ತದೆ. ಮೊದಲ ಬಾರಿಗೆ ಚಿಕ್ಕಮಗಳೂರಿನ ಗ್ರಾಹಕರ ಬೇಡಿಕೆಗೆ ಮಣಿದು ಅಂಗಡಿ ಮಾಲೀಕ ತರಿಸಿ ಮಾರಾಟ ಮಾಡಿದ್ದಾನೆ. ಗ್ರಾಹಕರ ಉತ್ಸಾಹ ಹಾಗೂ ಮೀನಿಗೆ ಇರುವ ಬೇಡಿಕೆ ಕಂಡು ಅಂಗಡಿ ಮಾಲೀಕ ಫುಲ್ ಖುಷ್ ಆಗಿದ್ದಾನೆ.