ಅಹಮದಾಬಾದ್ : ಗುಜರಾತ್‌ನ ಅಹಮದಾಬಾದ್ ನಗರದ 10 ಅಂತಸ್ತಿನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 125 ರೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಸಾಹಿಬಾಗ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ ಡಿ ಚಂಪಾವತ್ ತಿಳಿಸಿದ್ದಾರೆ.
ನಗರದ ಸಾಹಿಬಾಗ್ ಪ್ರದೇಶದಲ್ಲಿರುವ ರಾಜಸ್ಥಾನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಬೆಳಗಿನ ಜಾವ 4.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಬೆಂಕಿ ಹೊತ್ತಿಕೊಂಡ ಆಸ್ಪತ್ರೆಯ ನೆಲಮಾಳಿಗೆಯಿಂದ ಹೊಗೆ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು.
ಆಸ್ಪತ್ರೆಯಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯಿಂದಾಗಿ ನೆಲಮಾಳಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಹಲವು ವಸ್ತುಗಳಿಗೆ ಬೆಂಕಿ ತಗುಲಿ ಭಾರೀ ಹೊಗೆ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 125 ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಆಸ್ಪತ್ರೆಯನ್ನು ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದು, ಬೆಂಕಿ ಹೊತ್ತಿಕೊಂಡ ಬಗ್ಗೆ ಬೆಳಗಿನ ಜಾವ 4.30ರ ಸುಮಾರಿಗೆ ಕರೆ ಬಂದಿತ್ತು, ಸುಮಾರು ಎರಡು ಡಜನ್ ನಷ್ಟು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾಗಿ ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದ್ದಾರೆ.