Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಭ್ರೂಣ ಹತ್ಯೆ ಪ್ರಕರಣ ಸಿಐಡಿಗೆ, ಬೈಯ್ಯಪ್ಪನಹಳ್ಳಿ ಪೊಲೀಸರಿಂದ ತನಿಖೆ ಅಸಾಧ್ಯ : ಚಲುವರಾಯಸ್ವಾಮಿ

ಮಂಡ್ಯ : ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿ ಅಥವಾ ಬೇರೆ ತನಿಖಾ ಸಂಸ್ಥೆಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭ್ರೂಣ ಹತ್ಯೆ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ಪ್ರಕರಣ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ಮಂಡ್ಯ, ಮೈಸೂರು, ಬೆಂಗಳೂರು ಸೇರಿ ಹಳೇ ಮೈಸೂರು ಭಾಗದ ಮರ‍್ನಾಲ್ಕು ಜಿಲ್ಲೆಗಳ ಹೆಸರು ಥಳುಕು ಹಾಕಿಕೊಂಡಿರುವ ಕಾರಣ ಮಂಡ್ಯ ಜಿಲ್ಲೆ ಅಥವಾ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ಆರೋಪಿಗಳ ಪೈಕಿ ಮಂಡ್ಯ ಜಿಲ್ಲೆಯವರೆಂದು ಹೇಳಲಾಗಿರುವ ಮಂಡ್ಯ ತಾಲ್ಲೂಕಿನ ಹುಳ್ಳೇನಹಳ್ಳಿಯ ನಯನ್‌ಕುಮಾರ್ ಹಾಗೂ ಪಾಂಡವಪುರ ತಾಲ್ಲೂಕು ಸುಂಕಾತೊಣ್ಣೂರು ಗ್ರಾಮದ ನವೀನ್‌ಕುಮಾರ್ ಇಬ್ಬರು ಇದ್ದಾರೆ. ಉಳಿದಂತೆ ಪ್ರಮುಖ ಆರೋಪಿ ಶಿವನಂಜೇಗೌಡ ಮೈಸೂರಿನವನು, ಮೂಲ ಮಳವಳ್ಳಿ ತಾಲ್ಲೂಕಿನವನಾಗಿದ್ದಾನೆ. ದಾವಣಗೆರೆಯ ವೀರೇಶ್, ತಮಿಳುನಾಡು ಮೂಲದ ಡಾ. ತುಳಸೀರಾಂ, ಮೀನಾ, ಚಂದನ್ ಬಲ್ಲಾಳ್, ತುಕಾರಾಂ ಸೇರಿದಂತೆ ಮೈಸೂರಿನ ಮಾತಾ ಆಸ್ಪತ್ರೆಯ ಸಿಬ್ಬಂದಿ ಇದ್ದಾರೆ. ಈ ಪ್ರಕರಣ ಕೇವಲ ಮಂಡ್ಯಕ್ಕೆ ಸೀಮಿತವಾಗಿಲ್ಲ. ನಾಲ್ಕೈದು ಜಿಲ್ಲೆಗಳು ಆವರಿಸಿಕೊಂಡಿದೆ ಎಂದು ವಿವರಿಸಿದರು.

ಮಂಡ್ಯದಲ್ಲಿ ಭ್ರೂಣ ಹತ್ಯೆ ನಡೆದಿಲ್ಲ: ಮಂಡ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ ನಡೆದಿಲ್ಲ. ಆದರೆ, ಸ್ಕ್ಯಾನಿಂಗ್‌ ಮಾಡಿದ್ದಾರೆಂಬ ಆರೋಪ ಮಾತ್ರ ಬಂದಿದೆ. ಅದಕ್ಕೂ ಯಾವುದೇ ಶಾಶ್ವತ ಸ್ಥಳ ಇಲ್ಲ. ಮೊಬೈಲ್ ಸ್ಕ್ಯಾನಿಂಗ್‌ ಯಂತ್ರ ಬಳಸಿ ಬೇರೆ ಬೇರೆ ಸ್ಥಳದಲ್ಲಿ ಮಾಡಿದ್ದಾರೆ. ಇನ್ನು ಆಪರೇಷನ್ ಮಾತ್ರ ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.

ಸ್ಕ್ಯಾನಿಂಗ್‌ ಮಾತ್ರ ಹುಳ್ಳೇನಹಳ್ಳಿಯ ಆಲೆಮನೆಯಲ್ಲಿ ನಡೆದಿದೆ. ಅಲ್ಲಿ ಬಿಹಾರ ಮೂಲದ ಕಾರ್ಮಿಕರು ಇದ್ದಾರೆ. ಸ್ಕ್ಯಾನಿಂಗ್‌ ಮಾಡುತ್ತಿದ್ದರೆಂದು ಹೇಳಲಾದ ಕೊಠಡಿಯಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳೂ ಸಿಕ್ಕಿಲ್ಲ. ಎಲ್ಲವನ್ನೂ ಬೈಯ್ಯಪ್ಪನಹಳ್ಳಿ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆಯೂ ಮಾಹಿತಿ ಇದೆ. ಅದನ್ನು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆರೋಪಿಗಳನ್ನು ಕರೆತಂದು ಇಲ್ಲಿ ಒಂದಷ್ಟು ವಿಚಾರಣೆಗೊಳಪಡಿಸಿ ಮತ್ತಷ್ಟು ಮಾಹಿತಿ ಪಡೆಯಬಹುದು ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ