Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹಳೆ ಸಂಸತ್‌ ಭವನಕ್ಕೆ ಬೀಳ್ಕೊಡುಗೆ : ನೆಹರು ನೆನೆದ ಮೋದಿ

ನವದೆಹಲಿ : ಹಳೆ ಸಂಸತ್‌ ಭವನಕ್ಕೆ ಬೀಳ್ಕೊಡುಗೆ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂ ಅವರನ್ನು ನೆನೆದಿದ್ದಾರೆ.

ಸಂಸತ್ತಿನಲ್ಲಿ ಜವಾಹರಲಾಲ್ ನೆಹರೂ ಅವರ ಐತಿಹಾಸಿಕ ಎ ಟ್ರೈಸ್ಟ್ ವಿತ್ ಡೆಸ್ಟಿನಿ ಭಾಷಣದ ಪ್ರತಿಧ್ವನಿಯು ದೇಶದ ಚುನಾಯಿತ ಪ್ರತಿನಿಧಿಗಳಿಗೆ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಪ್ರಧಾನಿ ಮೋದಿ, ಹಳೆಯ ಸಂಸತ್ತಿನ ಕಟ್ಟಡದ ಸುಮಾರು ಎಂಟು ದಶಕಗಳ ಪ್ರಯಾಣ ಕುರಿತು ಮಾತನಾಡಿದ್ದಾರೆ.

ಸಂಸತ್ತಿನಲ್ಲಿ ನೆಹರೂ ಮಾಡಿದ ಮಧ್ಯರಾತ್ರಿಯ ಭಾಷಣ ಈಗಲೂ ಪ್ರತಿಧ್ವನಿಸುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರು, ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ಈ ದೇಶ ಉಳಿಯುತ್ತದೆ ಎಂದು ಹೇಳಿದ್ದೂ ಈ ಸದನದಲ್ಲೇ. ಸಂಸತ್ತಿನ ಐತಿಹಾಸಿಕ ಪಯಣದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ನೆನಪಿಸಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.

ರಾಜೇಂದ್ರ ಪ್ರಸಾದ್ ಅವರಿಂದ ಹಿಡಿದು ರಾಮನಾಥ್ ಕೋವಿಂದ್, ದ್ರೌಪದಿ ಮುರ್ಮು ಅವರ ವರೆಗೆ ಎಲ್ಲರ ಮಾರ್ಗದರ್ಶನವನ್ನು ಈ ಸಂಸತ್ತು ಪಡೆದುಕೊಂಡಿದೆ. ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಅವರ ಕಾಲಕ್ಕೂ ಈ ಸಂಸತ್ತು ಸಾಕ್ಷಿಯಾಗಿದೆ. ಸಂಸತ್ತಿನ ಕಲಾಪಗಳು ಈಗ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬಹುದು. ಆದರೆ ಈ ಕಟ್ಟಡವು ಭವಿಷ್ಯದ ಪೀಳಿಗೆಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.

ಆಗಸ್ಟ್ 15, 1947 ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ. ಅಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ದೇಶದ ಮೊದಲ ಪ್ರಧಾನಿ ನೆಹರೂ,ಈ ತಡರಾತ್ರಿಯಲ್ಲಿ ಜಗತ್ತೇ ಮಲಗಿರುವಾಗ, ಭಾರತ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಂಡಿದೆ ಎಂದು ಹೇಳಿದ್ದರು.

ಸಂಸತ್ತಿನ ವಿಶೇಷ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಹಳೆ ಸಂಸತ್ತಿನಲ್ಲಿ ಮೊದಲ ದಿನದ ಅಧಿವೇಶನ ನಡೆಯಿತು. ಮಂಗಳವಾರ ಸಂಸತ್‌ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ