Mysore
24
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆಗೆ ನೈತಿಕ ಸಮಿತಿ ಶಿಫಾರಸು

ನವದೆಹಲಿ : ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಛಾಟಿಸುವಂತೆ ಲೋಕಸಭೆ ನೈತಿಕ ಸಮಿತಿಯು ಶಿಫಾರಸು ಮಾಡಿದೆ ಎಂದು ಸಂಸತ್‌ನ ಉನ್ನತ ಮೂಲಗಳು ಬುಧವಾರ ಹೇಳಿವೆ.

ಈ ವರದಿಯನ್ನು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಲೋಕಸಭ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಗುತ್ತದೆ. ಚರ್ಚೆಯ ಬಳಿಕ ಪೂರಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೊಯಿತ್ರಾ ಅವರು ಗುರುವಾರ ಸಮಿತಿ ಮುಂದೆ ಹಾಜರಾಗುವ ನಿರೀಕ್ಷೆ ಇದೆ.

ಮಹುವಾ ಮೊಯಿತ್ರಾ ಅವರು ಈ ಹಿಂದೆ ನೈತಿಕ ಸಮಿತಿಯ ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೇ, ಸಂಸತ್‌ನ ನನ್ನ ಲಾಗಿನ್‌ ಐಡಿಯನ್ನು ಉದ್ಯಮಿ ಹೀರಾನಂದಾನಿಗೆ ಕೊಟ್ಟಿದ್ದೆ, ಎಂದು ತಪ್ಪೊಪ್ಪಿಕೊಂಡಿದ್ದರು.

ಮಹುವಾ ಮೊಯಿತ್ರಾ ವಿರುದ್ಧದ ತನಿಖೆಯನ್ನು ಲೋಕಪಾಲ ಸಂಸ್ಥೆಯು ಸಿಬಿಐಗೆ ಶಿಫಾರಸು ಮಾಡಿದೆ, ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಬುಧವಾರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ, ಈ ವಿಚಾರದಲ್ಲಿ ಲೋಕಪಾಲ ಸಂಸ್ಥೆಯಾಗಲೀ, ಸಿಬಿಐನಿಂದಾಗಲೀ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.

ನನ್ನ ದೂರಿನ ಮೇರೆಗೆ ಲೋಕಪಾಲ ಸಂಸ್ಥೆಯು ಲಂಚಕ್ಕಾಗಿ ದೇಶದ ಭದ್ರತೆಯನ್ನೇ ಅಡವಿಟ್ಟ ಮಹುವಾ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದೆ, ಎಂದು ದುಬೆ ಅವರು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

500 ಪುಟಗಳ ವರದಿಯನ್ನು ಸಂಸದೀಯ ನೈತಿಕ ಸಮಿತಿ ಸಲ್ಲಿಸಿದ್ದು, ಮೊಯಿತ್ರಾ ಅವರ ಕ್ರಮಗಳು ತೀವ್ರ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್ ಆಗಿವೆ ಎಂದು ಹೇಳಿದೆ. ಅವರ ವಿರುದ್ಧ ಕಠಿಣ ಶಿಕ್ಷೆಗೆ ಶಿಫಾರಸು ಮಾಡಿದೆ. ಇಡೀ ಪ್ರಕರಣದ ಕುರಿತು ಕಾನೂನಾತ್ಮಕ, ಸೂಕ್ಷ್ಮ, ಸಾಂಸ್ಥಿಕ ಹಾಗೂ ಸಮಯದ ಮಿತಿಯ ತನಿಖೆ ನಡೆಸಬೇಕು ಎಂದು ಕೂಡ ಸಲಹೆ ನೀಡಿದೆ.

ಸಂಸದೆ ಮಹುವಾ ಮೊಯಿತ್ರಾ ಅವರು, ಉದ್ಯಮಿ ದರ್ಶನ್‌ ಹೀರಾನಂದಾನಿ ಅವರಿಂದ ಕೋಟಿಗಟ್ಟಲೆ ಹಣ ಹಾಗೂ ದುಬಾರಿ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ಪಡೆದುಕೊಂಡು, ಅದಕ್ಕೆ ಪ್ರತಿಯಾಗಿ ಉದ್ಯಮಿ ಗೌತಮ್‌ ಅದಾನಿ ಸಮೂಹ ಕಂಪನಿಗಳ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ, ಎಂದು ದುಬೆ ಅವರು ಆರೋಪಿಸಿದ್ದರು. ಈ ಸಂಬಂಧ ಒಂದಷ್ಟು ದಾಖಲೆಗಳನ್ನೂ ಬಿಡುಗಡೆ ಮಾಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ