Mysore
22
clear sky

Social Media

ಶನಿವಾರ, 21 ಮಾರ್ಚ್ 2026
Light
Dark

ಬಸ್ ಚಾಲನೆ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಡ್ರೈವರ್​​ ಸಾವು : ಪೆಟ್ರೋಲ್‌ ಬಂಕ್​ಗೆ ನುಗ್ಗಿದ ಬಸ್

ವಿಜಯಪುರ : ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಸರ್ಕಾರಿ ಬಸ್ ಪೆಟ್ರೋಲ್‌ ಬಂಕ್​ಗೆ ನುಗ್ಗಿರುವ ಘಟನೆ ಜಿಲ್ಲೆಯ ಸಿಂದಗಿ ನಗರದಲ್ಲಿ ನಿನ್ನೆ ನಡೆದಿದೆ. ಮುರಿಗೆಪ್ಪ ಅಥಣಿ ಮೃತ ಚಾಲಕ. ಮಂಗಳವಾರ ಸಾಯಂಕಾಲ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಕಲಬುರಗಿ ಜಿಲ್ಲೆಯ ಅಪ್ಜಲಪುರದಿಂದ ವಿಜಯಪುರಕ್ಕೆ ಹೊರಟಿತ್ತು. ದಾರಿ ಮಧ್ಯೆ ಬಸ್ ಹೆಡ್​ಲೈಟ್ ಸಮಸ್ಯೆಯಾಗಿ ಬಂದ್​ ಆಗಿದೆ. ಈ ಹಿನ್ನೆಲೆ ದಾರಿ ಮಧ್ಯೆ ಪ್ರಯಾಣಿಕರನ್ನು ಕೆಳಗೆ ಇಳಿಸಿ, ಸಿಂದಗಿ ಡಿಪೋಗೆ ಬಸ್​​ ಹೊರಟಿತ್ತು.

ಹೀಗೆ ಹೊರಡುವಾಗ ಬಸ್​ ಸಿಂದಗಿ ನಗರ ಪ್ರವೇಶಿಸುತ್ತಿದ್ದಂತೆ ಚಾಲಕ ಮುರಿಗೆಪ್ಪ ಅಥಣಿ ಅವರಿಗೆ ಹೃದಯಾಘಾತವಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಆಗ ಬಸ್​ ನಿಯಂತ್ರಣ ತಪ್ಪಿ ಪೆಟ್ರೋಲ್​ ಬಂಕ್​ಗೆ ನುಗ್ಗುತ್ತಿದ್ದಂತೆ ಅಕ್ಕ-ಪಕ್ಕದಲ್ಲಿದ್ದ ಜನ ಗಾಭರಿಯಿಂದ ಚಲ್ಲಾಪಿಲ್ಲಿಯಾಗಿದ್ದಾರೆ.

ಇದನ್ನು ಕಂಡ ನಿರ್ವಾಹಕ ಶರಣು ಟಾಕಳಿಯವರು ಬಸ್​ನ ಬ್ರೇಕ್ ಹಿಡಿದು ನಿಲ್ಲಿಸಿದ್ದಾರೆ. ಕಂಡೆಕ್ಟರ್​​ ಶರಣು ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಅಲ್ಲದೇ ಬಸ್‌ನಲ್ಲಿ ಪ್ರಯಾಣಿಕರು ಇಲ್ಲದೆ ಇರುವುದರಿಂದ ಸಂಭವನೀಯ ಅಪಾಯ ತಪ್ಪಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಪ್ಜಲಪುರ ಡಿಪೋ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!