Mysore
17
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ಜಾತ್ಯತೀತ ಸಿದ್ದರಾಮಯ್ಯರಿಗಿದೆಯೇ? : ಬಿಜೆಪಿ

ಬೆಂಗಳೂರು : ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಹಿಂದೂಗಳು ಬದುಕುವ ಹಾಗಿಲ್ಲವಾ? ಹಿಂದೂಗಳಿಗೆ ರಕ್ಷಣೆ ಕೊಡುವುದಿಲ್ಲವೇ? ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ಜಾತ್ಯತೀತ ಸಿದ್ದರಾಮಯ್ಯರಿಗಿದೆಯೇ? ಎಂದು ಪ್ರಶ್ನಿಸಿದೆ.

ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ,ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆಗೆ ರಾಜ್ಯ ಸರ್ಕಾರದ ನೀತಿ, ವೈಫಲ್ಯಗಳೇ ಕಾರಣ. ಹಿಂದೂಗಳನ್ನು ಮುಗಿಸುತ್ತೇವೆ ಎಂದು ಹೇಳಿದ ಜಿಹಾದಿ ಸಂಘಟನೆಗಳಿಗೆ ಬೆಂಬಲವಾಗಿ ಕಾಂಗ್ರೆಸ್ ಸರ್ಕಾರ ನಿಂತಿರುವುದಕ್ಕೆ ಬೇರೇನು ಸಾಕ್ಷಿ ಬೇಕು. ಗಣೇಶ ಚತುರ್ಥಿಗೆ ಹಿಂದೂಗಳು ಸ್ಥಾಪಿಸುವ ಗಣಪತಿಗೆ ನೂರೆಂಟು ಅನುಮತಿ ಕೇಳುವ ಕೈ ಸರ್ಕಾರ, ಸಮಾಜದ ಶಾಂತಿ ಕದಡುವ ಇಂತಹ ಮೆರವಣಿಗೆಗಳಿಗೆ ಅನುಮತಿ ನೀಡಿದ್ದರ ಹಿನ್ನಲೆ ಏನು ಎಂದು ಪ್ರಶ್ನೆ ಮಾಡಿದೆ.

ಕೋಮು ಸೂಕ್ಷ್ಮ ಜಿಲ್ಲೆಯಾದ ಶಿವಮೊಗ್ಗ ಮತ್ತೊಮ್ಮೆ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಗದ್ದಲಕ್ಕೆ ಕಾರಣವಾಗಿದ್ದು, ಇಷ್ಟು ದಿನ ತಣ್ಣಗಿದ್ದ ಶಿವಮೊಗ್ಗ ಮತ್ತೆ ರಣರಂಗವಾಗಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ.

ಕಿಡಿಗೇಡಿಗಳು ಸಿಕ್ಕ ಸಿಕ್ಕ ಕಡೆ ಕಲ್ಲು ತೂರಿದ್ದು ಕಾರು, ಬೈಕ್, ಆಟೋಗಳು,ಹಲವು ಮನೆಗಳ ಕಿಟಕಿ ಗಾಜುಗಳು ಜಖಂಗೊಂಡಿವೆ. ಗಲಾಟೆಯಲ್ಲಿ ಮಹಿಳೆ, ಮಕ್ಕಳು ಸೇರಿ 7ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಆಸ್ಪತ್ರೆ ಸೇರಿದ್ದಾರೆ. ರಾಗಿಗುಡ್ಡ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಘಟನೆಗೆ ಕರ್ನಾಟಕ ಬಿಜೆಪಿ ಖಂಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!