Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ರಾಬರ್ಟ್ ವಾದ್ರಾ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ನೀರಿನಲ್ಲಿ ನಾಶ: ತನಿಖಾ ತಂಡಕ್ಕೆ ಬ್ಯಾಂಕ್ ಉತ್ತರ!

ಚಂಡೀಗಡ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮತ್ತು ಹರ್ಯಾಣದ ಮಾಜಿ ಸಿಎಂ ಭೂಪೇಂದರ್ ಸಿಂಗ್ ಹೂಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆಗೆ ಟ್ವಿಸ್ಟ್ ಸಿಕ್ಕಿದೆ. ವಾದ್ರಾ ಅವರ ಕಂಪೆನಿಗೆ ಸೇರಿದ ಹಣಕಾಸು ವಹಿವಾಟುಗಳ ಕುರಿತಾದ ಮಹತ್ವದ ದಾಖಲೆಗಳನ್ನು ಇರಿಸಿದ್ದ ಬ್ಯಾಂಕ್‌ನ ಶಾಖೆಯೊಳಗೆ ಮಳೆ ನೀರು ನುಗ್ಗಿ, ಕಡತಗಳು ನಾಶವಾಗಿದೆ ಎಂದು ಹರ್ಯಾಣ ಪೊಲೀಸ್ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಶಾಖೆಯ ಬೇಸ್‌ಮೆಂಟ್ ಒಳಗೆ ನೀರು ನುಗ್ಗಿದ್ದರಿಂದ, 2008 ರಿಂದ 2012ರ ಅವಧಿಯಲ್ಲಿ ವಾದ್ರಾ ಅವರ ಹಣಕಾಸು ವಹಿವಾಟುಗಳ ದಾಖಲೆಗಳು ನಾಶವಾಗಿದೆ ಎಂದು ಎಸ್‌ಐಟಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ರಿಯಲ್ ಎಸ್ಟೇಟ್ ಡೀಲ್‌ ವೇಳೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವು 2014ರ ಲೋಕಸಭೆ ಚುನಾವಣೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಸಂಬಂಧ ರಾಬರ್ಟ್ ವಾದ್ರಾ ಹಾಗೂ ಭೂಪಿಂದತ್ ಸಿಂಗ್ ಹೂಡಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ರಾಬರ್ಟ್ ವಾದ್ರಾ ಅವರು ನಿರ್ದೇಶಕನ ಹುದ್ದೆಯಲ್ಲಿದ್ದ ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ಸ್ಕೈಲೈಟ್ ರಿಯಾಲ್ಟಿ ಕಂಪೆನಿಗಳ ಖಾತೆಗಳಿಗೆ ಬಂದ ಹಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಎಸ್‌ಐಟಿ ಪತ್ರ ಬರೆದಿತ್ತು. ಈ ವರ್ಷದ ಮೇ 26ರಂದು ಪ್ರತಿಕ್ರಿಯೆ ನೀಡಿರುವ ಬ್ಯಾಂಕ್, ತನ್ನ ಬ್ಯಾಂಕ್ ಶಾಖೆಯ ಬೇಸ್‌ಮೆಂಟ್‌ನಲ್ಲಿ ನೀರು ತುಂಬಿದ್ದರಿಂದ 2008 ರಿಂದ 2012ರ ನಡುವಿನ ದಾಖಲೆಗಳು ನಾಶವಾಗಿವೆ ಎಂದು ಹೇಳಿದೆ.

ಇತರೆ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳು ಕೂಡ ನಾಶವಾಗಿವೆಯೇ ಎಂಬುದನ್ನು ದೃಢಪಡಿಸುವಂತೆ ಬ್ಯಾಂಕ್‌ಗೆ ಎಸ್‌ಐಟಿ ನೋಟಿಸ್‌ಗಳನ್ನು ಕಳುಹಿಸಿದೆ. ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ಸ್ಕೈಲೈಟ್ ರಿಯಾಲ್ಟಿಗೆ ಸೇರಿದ ಸಂಬಂಧಿತ ದಾಖಲೆಗಳು ನಾಶವಾದ ಘಟನೆಯ ತನಿಖೆಗಾಗಿ ಜೂನ್ 20ರಂದು, ಹೊಸದಿಲ್ಲಿಯ ಬ್ಯಾಂಕ್‌ನ ನ್ಯೂ ಫ್ರೆಂಡ್ಸ್ ಕಾಲೋನಿ ಶಾಖೆಗೆ ಕೂಡ ನೋಟಿಸ್ ಕಳುಹಿಸಲಾಗಿದೆ.

ಏನಿದು ಪ್ರಕರಣ?

2008ರ ಫೆಬ್ರವರಿಯಲ್ಲಿ ಗುರ್‌ಗಾಂವ್‌ನ ಶಿಕೋಹ್ಪುರದಲ್ಲಿ ಓಂಕಾರೇಶ್ವರ ಪ್ರಾಪರ್ಟೀಸ್ ಕಡೆಯಿಂದ 7.5 ಕೋಟಿ ರೂಪಾಯಿಗೆ 3.5 ಎಕರೆ ಜಮೀನನ್ನು ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಖರೀದಿ ಮಾಡಿತ್ತು. ಅದಕ್ಕೆ ವಾಣಿಜ್ಯ ಪರವಾನಗಿ ಪಡೆದ ಬಳಿಕ ಕಂಪೆನಿಯು ಅದೇ ಆಸ್ತಿಯನ್ನು ಡಿಎಲ್‌ಎಫ್‌ಗೆ 58 ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು. ಲ್ಯಾಂಡ್ ಡೀಲ್‌ಗೆ ಪ್ರತಿಯಾಗಿ ಹೂಡಾ ಸರ್ಕಾರವು ಡಿಎಲ್‌ಎಫ್‌ಗೆ ವಾಜಿರಾಬಾದ್‌ನಲ್ಲಿ ಹೂಡಾ ಸರ್ಕಾರವು 350 ಎಕರೆ ಜಾಗ ಹಂಚಿಕೆ ಮಾಡಿತ್ತು ಎಂದು ಆರೋಪಿಸಲಾಗಿತ್ತು.

ಬ್ಯಾಂಕ್‌ನಿಂದ ಪ್ರತಿಕ್ರಿಯೆಗೆ ಕಾಯಲಾಗುತ್ತಿದೆ. ಈ ಪ್ರಕರಣದ ತನಿಖೆಯು 2018ರ ಸೆ. 1ರಂದು ಆರಂಭವಾಗಿತ್ತು. ಬಿಜೆಪಿ ನೇತೃತ್ವದ ಹರ್ಯಾಣ ಸರ್ಕಾರವು ಹೂಡಾ, ವಾದ್ರಾ, ರಿಯಲ್ ಎಸ್ಟೇಟ್ ದಿಗ್ಗಜ ಡಿಎಲ್‌ಎಫ್, ಓಂಕಾರೇಶ್ವರ ಪ್ರಾಪರ್ಟೀಸ್ ಮತ್ತು ಸ್ಕೈಲೈಟ್ ಹಾಸ್ಪಿಟಾಲಿಟಿಗಳನ್ನು ಆರೋಪಿಗಳನ್ನಾಗಿಸಿ ಎಫ್‌ಐಆರ್ ದಾಖಲು ಮಾಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!