Mysore
26
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ವೈದ್ಯ ರಮೇಶ್‌!

ಹಾಸನ : ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ದಸರಾ ಜಂಬೂ ಸವಾರಿ ಆನೆ ಆರ್ಜುನನ ಸಾವಿನ ಬಗ್ಗೆ ಹಲವಾರು ಊಹಾಪೋಗಳು ಹರಿದಾಡಿದ್ದವು. ಈ ಎಲ್ಲಾ ವದಂತಿಗಳ ಬಗ್ಗೆ ಕಾಡಾನೆ ಕಾರ್ಯಾಚರಣೆ ವೇಳೆ ಜೊತೆಯಲ್ಲಿದ್ದ ವೈದ್ಯ ರಮೇಶ್‌, ಅರ್ಜುನ ಸಾವಿನ ನಿಜವಾದ ಕಾರಣವನ್ನು ತಿಳಿಸಿದ್ದಾರೆ.

ಅರ್ಜುನನ ಕಾಲಿಗೆ ಗುಂಡೇಟು ತಗುಲಿಲ್ಲ. ಕಾಡಾನೆ ದಾಳಿಯಿಂದಲೇ ಅರ್ಜುನ ಮೃತಪಟ್ಟಿದ್ದಾನೆ ಎಂದು ವನ್ಯಜೀವಿ ವೈದ್ಯ ರಮೇಶ್ ತಿಳಿಸಿದ್ದಾರೆ. ಆ ಮೂಲಕ ಅರ್ಜುನನ ಸಾವಿನ ಬಗ್ಗೆ ಹರಡಿದ್ದ ಹಲವು ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಾಚರಣೆ ತಂಡದ ಬಳಿ ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರೆಲ್ ಚರ್ರೆ ಕೋವಿ ಮಾತ್ರ ಅದರಲ್ಲಿ ಆನೆ ಸಾಯುವುದಿಲ್ಲ. ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ. ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟಿದೆ. ಬಹುಶಃ ಮಾವುತ ವಿನು ಅರ್ಜುನನ ಮೇಲೆ ಇದ್ದಿದ್ದರೆ ಹೋರಾಟ ಮಾಡಬಹುದಿತ್ತಾ ಅಥವಾ ಆಗಲು ಹೀಗೆ ಆಗುತ್ತಿತ್ತ ಎಂದು ಹೇಳುವುದು ಕಷ್ಟ ಎಂದಿದ್ದಾರೆ.

ಕಾರ್ಯಾಚರಣೆ ದಿನ ನಾನು ಆನೆ ಮಾವುತ ವಿನು, ಹಾಗೂ ಭೀಮ ಆನೆ ಮಾವುತ ಗುಂಡ ಅರ್ಜುನನ ಮೇಲೆ ಕುಳಿತ್ತಿದ್ದೆವು. ಪ್ರಶಾಂತ್ ಆನೆ ಮೇಲೆ ಕೊಡಗಿನ ಡಿಆರ್​ಎಫ್​ಓ ರಂಜನ್ ಇದ್ದರು. ವಿಕ್ರಾಂತ್ ಹೆಸರಿನ ಒಂದು ಹಾಗೂ ಮತ್ತೊಂದು ಸಲಗ ಸೇರಿ ಎರಡು ಆನೆಗಳ ಸೆರೆಗೆ ಟಾರ್ಗೆಟ್ ಫಿಕ್ಸ್ ಆಗಿತ್ತು. ವಿಕ್ರಾಂತ್ ಆನೆ ಎದುರಾದರೆ ನಾನು, ಹಾಗೂ ಇನ್ನೊಂದು ಆನೆ ಎದುರಾದರೆ ರಂಜನ್ ಅರವಳಿಕೆ ಮದ್ದು ನೀಡುವ ನಿರ್ಧಾರ ಆಗಿತ್ತು.

ನಾವು 400 ಮೀಟರ್ ಮುಂದೆ ಹೋದಾಗ ಒಂದು ಆನೆ ಕಾಣಿಸಿತು. ಕಾಡಿನಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿದ್ದರಿಂದ ಆನೆಯ ಮುಖ ಕಾಣಲಿಲ್ಲ. ಆನೆಯ ಹಿಂಬದಿಯ ಸ್ವಲ್ಪ ಭಾಗ ಕಾಣುತ್ತಿದ್ದಾಗ ಅದು ಸಣ್ಣ ಆನೆ ಎಂದು ಭಾವಿಸಿದೆವು. ಅಲ್ಲಿರುವ ಆನೆ ನಮ್ಮ ಟಾರ್ಗೆಟ್ ಆನೆಯಾ ಅಥವಾ ಸಲಗವೇ ಅಥವಾ ಹೆಣ್ಣಾನೆಯಾ ಎನ್ನೋದು ಖಾತ್ರಿ ಆಗಬೇಕಿತ್ತು. ನಾವು ಮೇಲಿದ್ದವು ಆ ಒಂಟಿ ಸಲಗ ಕೆಳಗೆ ಇತ್ತು. ಇದು ದೊಡ್ಡ ಆನೆ ಎಂದು ಖಾತ್ರಿ ಆದಾಗ ಆನೆ ಸುತ್ತುವರೆದೆವು.

ನಾನು ಡಾಟ್ ಮಾಡುತ್ತೇನೆ ಎಂದು ಹೇಳಿ ನಾನು ನನ್ನ ಅರವಳಿಕೆ ಸಜ್ಜು ಮಾಡಿಕೊಂಡೆ. ಪ್ರಸರ್ ಫಿಕ್ಸ್ ಮಾಡಿ ಡಾಟ್ ಮಾಡಲು ರೆಡಿಯಾಗಿದ್ದ ವೇಳೆಗೆ ಆ ಆನೆ ಏಕಾಏಕಿ ದಾಳಿ ಮಾಡಿತು. ಅದು ಮುಖವನ್ನು ಮುಂದೆ ಮಾಡಿ ಬಂದಿದ್ದರಿಂದ ನಾನು ಮುಖಕ್ಕೆ ಡಾಟ್ ಮಾಡಲು ಆಗಲಿಲ್ಲ. ಆಕಸ್ಮಾತ್ ಹಾಗೆ ಇಂಜೆಕ್ಟ್ ಆದರೆ ಆನೆ ಜೀವಕ್ಕೆ ಅಪಾಯ ಇದೆ ಹಾಗಾಗಿ ಆಗ ಡಾಟ್ ಮಾಡಲು ಆಗಲಿಲ್ಲ.

ಏಕಾಏಕಿ ಅರ್ಜುನನ ಮೇಲೆ ಆನೆ ದಾಳಿ ಮಾಡಿದಾಗ ನಾವೆಲ್ಲ ಕೆಳಗೆ ಬೀಳುವಂತೆ ಆದೆವು. ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಆಕಾಶದ ಕಡೆಗೆ ಹಾರಿ ಕೆಳಗೆ ಬೀಳುವಾಗ ಪ್ರಶಾಂತ್ ಆನೆ ಕಾಲಿಗೆ ಬಿದ್ದಿದೆ. ಅದು ನನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

ಪ್ರಶಾಂತ್​ ಆನೆಗೆ ಅರವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೆ ನಾನು ಓಡಿದೆ. ಅಷ್ಟರಲ್ಲಿ ಅರ್ಜುನ ಕಾಡಾನೆ ಜೊತೆ ಫೈಟ್ ಮಾಡಿ ಓಡಿಸಿತು. ನಾವು ಪ್ರಶಾಂತ್ ಆನೆ ಬಳಿ ಬಂದೆವು. ಅಲ್ಲಿ ರಿವರ್ಸ್ ಇಂಜೆಕ್ಷನ್ ಕೊಡುವ ವೇಳೆಗೆ ಕಾಡಾನೆ ಮತ್ತೆ ಬಂದು ಜಗಳಕ್ಕೆ ಬಿದ್ದಿದೆ. ಅರ್ಜುನ ಮಾವುತ ವಿನು ಕೂಡ ನನ್ನೊಟ್ಡಿಗೆ ಇದ್ದಿದ್ದರಿಂದ ಅಲ್ಲಿ ಮತ್ತೊಬ್ಬ ಹುಡುಗ ಅರ್ಜುನನ ಮೇಲಿದ್ದ ಎಂದು ವಿವರಿಸಿದರು.

ಭಾವುಕರಾದ ವೈದ್ಯ ರಮೇಶ್‌ : ನಾವು ವಾಪಸ್ ಬರುವ ವೇಳೆಗೆ ಅಲ್ಲಿ ಎರಡೂ ಆನೆಗಳ ನಡುವೆ ಜಗಳ ಶುರುವಾಗಿತ್ತು. ನಾನು ಮತ್ತೊಂದು ಸುತ್ತು ಅರವಳಿಕೆ ಲೋಡ್ ಮಾಡಿ ಕಾಡಾನೆಗೆ ಹೊಡೆದೆ. ಆದರೆ ಆ ಆನೆ ಕೆಳಗೆ ಬೀಳಲಿಲ್ಲ ಅಷ್ಟೊತ್ತಿಗೆ ಅರ್ಜುನನಿಗೆ ಗಂಭೀರವಾಗಿ ಗಾಯವಾಗಿ ಕೆಳಗೆ ಬಿದ್ದಿದ್ದ.

ಈ ಆನೆಗಳ ಕಾಳಗ ಶುರುವಾದಾಗ ಬೇರೆ ಆನೆಗಳು ಹೆದರಿ ಓಡಿವೆ. ಅರ್ಜುನ ತಾನು ಪ್ರಾಣ ಬಿಟ್ಟು ನಮ್ಮನ್ನ ಉಳಿಸಿದ್ದಾನೆ. ನಾನು ನಿತ್ಯ ಹೊರ ಬರುವಾಗ ಕೈ ಮುಗಿದು ಬರಬೇಕು ಎಂದು ವೈದ್ಯ ರಮೇಶ್ ಅರ್ಜುನನ ಸಾವು ನೆನೆದು ಭಾವುಕರಾಗಿದ್ದಾರೆ.

ಅರ್ಜುನನೊಂದಿಗೆ ನಾನು ಇದುವರೆಗೆ 65 ಆನೆ ಸೆರೆ ಕಾರ್ಯಾಚರಣೆ ಮಾಡಿದ್ದೇನೆ. 40 ಆನೆಗಳಿಗೆ ನಾನೇ ಅರವಳಿಕೆ ಡಾಟ್ ಮಾಡಿದ್ದೇನೆ. 7 ಹುಲಿ, 50 ಕ್ಕೂ ಹೆಚ್ಚು ಚಿರತೆ, 10 ಕರಡಿ ಡಾಟ್ ಮಾಡಿದ್ದೇನೆ. ಎಲ್ಲವು ಕೂಡ ಯೋಜನೆಯಂತೆಯೇ ನಡೆಯುತ್ತೆ ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!