Mysore
28
few clouds

Social Media

ಬುಧವಾರ, 14 ಜನವರಿ 2026
Light
Dark

ನನಗಿನ್ನೂ ರಾಜೀನಾಮೆ ಪತ್ರ ಬಂದಿಲ್ಲ: ಶೆಟ್ಟರ್‌ ಬಿಜೆಪಿಗೆ ಮರಳಿದ್ದರ ಬಗ್ಗೆ ಡಿಕೆಶಿ ಫಸ್ಟ್‌ ರಿಯಾಕ್ಷನ್‌

ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದ ಜಗದೀಶ್‌ ಶೆಟ್ಟರ್‌ ಇದೀಗ ಬಿಜೆಪಿಗೆ ಮರಳಿದ್ದಾರೆ. ದೆಹಲಿಯ ಬಿಜೆಪಿಯ ಕಚೇರಿಯಲ್ಲಿ ಜೆಪಿ ನಡ್ಡಾ ಸಮ್ಮುಖದಲ್ಲಿ ಶೆಟ್ಟರ್‌ ಬಿಜೆಪಿಗೆ ಮರಳಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ. ಇನ್ನು ಬಿಜೆಪಿಗೆ ಮರಳಿದ ಬಳಿಕ ಮಾತನಾಡಿದ ಅವರು ಕಾಂಗ್ರೆಸ್‌ ಎಂಎಸ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಡಿಕೆ ಶಿವಕುಮಾರ್‌ ಅವರಿಗೆ ರಾಜೀನಾಮೆ ಪತ್ರವನ್ನು ಫ್ಯಾಕ್ಸ್‌ ಮಾಡಿದ್ದೇನೆ ಎಂದಿದ್ದಾರೆ.

ಅತ್ತ ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ಮರಳುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಶೆಟ್ಟರ್‌ ಅವರ ಈ ಅನಿರೀಕ್ಷಿತ ನಡೆ ಕುರಿತು ಇದೀಗ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಡಿಕೆ ಶಿವಕುಮಾರ್‌ ” ಕಾಂಗ್ರೆಸ್‌ ಅಧ್ಯಕ್ಷನಾಗಿ ನನಗೆ ರಾಜೀನಾಮೆ ಪತ್ರ ತಲುಪಿಲ್ಲ. ಜಗದೀಶ್‌ ಶೆಟ್ಟರ್‌ ಬಿಜೆಪಿಯಿಂದ ಪಕ್ಷಕ್ಕೆ ವಾಪಸ್‌ ಕರೆದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ನನ್ನ ಬಳಿ ಹೇಳಿದ್ದರು. ನಾನು ನಿನ್ನೆ ಬೆಳಗ್ಗೆ ಕೂಡ ಅವರ ಬಳಿ ಮಾತನಾಡಿದ್ದೆ. ನಾನು ಅಂತ ಕೆಲಸ ಮಾಡವುದಿಲ್ಲ, ನಾನು ಹೋಗುವುದಿಲ್ಲ. ರಾಜಕಾರಣಕ್ಕೆ ಕಾಂಗ್ರೆಸ್‌ ಪಕ್ಷ ನನಗೆ ಮರುಜೀವ ಕೊಟ್ಟಿದೆ. ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ನನಗೆ ಹೇಳಿದ್ದರು. ಅದನ್ನೇ ನಾನು ಗಮನದಲ್ಲಿಟ್ಟುಕೊಂಡು ಮೈಸೂರಿನಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೆ. ನಂತರ ರಾತ್ರಿಯೆಲ್ಲಾ ಬಿಜೆಪಿ ಕಚೇರಿಯಲ್ಲಿದ್ದಾರೆ, ಮಾತುಕತೆ ನಡೆದಿದೆ ಎಂಬ ಮಾಹಿತಿ ಬಂತು” ಎಂದು ಹೇಳಿಕೆ ನೀಡಿದರು.

ಇನ್ನೂ ಮುಂದುವರಿದು ಮಾತನಾಡಿದ ಡಿಕೆ ಶಿವಕುಮಾರ್‌ “ನಮ್ಮ ಕಾಂಗ್ರೆಸ್‌ ಪಕ್ಷ ಒಬ್ಬ ಹಿರಿಯ ನಾಯಕ ಅಂತ ಹೇಳಿ ಗೌರವದಿಂದ ನಡೆದುಕೊಂಡಿದ್ದೆವು. ಅವರೇ ಹೇಳಿದ್ರು ನಮಗೆ.. ಆ ಪಕ್ಷ ಒಳ್ಳೆದಲ್ಲ, ಮೊನ್ನೆ ತಾನೆ ಅವರೂ ಕೂಡ ಕೆಲವು ಹೇಳಿಕೆಗಳನ್ನು ಕೊಟ್ಟಿದ್ದಾರೆ. ರಾಮಮಂದಿರ ವಿಚಾರದಲ್ಲಿ ಬಿಜೆಪಿ ಯಾವ ರೀತಿ ದುರುಪಯೋಗ ಮಾಡ್ತಾ ಇದೆ ಎಂದು ಹೇಳಿದ್ದಾರೆ. ಅಂತಹ ಹಿರಿಯ ನಾಯಕನ ಬಗ್ಗೆ ನಾವು ವಿಶ್ವಾಸವನ್ನು ವ್ಯಕ್ತಪಡಿಸಿದ್ವಿ. ಈಗ ವಿಶ್ವಾಸಕ್ಕೆ ಧಕ್ಕೆ ಆಗ್ತಾ ಇದೆ. ಸ್ಪೀಕರ್‌ಗೆ, ಅಧ್ಯಕ್ಷರಿಗೆ ಫ್ಯಾಕ್ಸ್‌ನಲ್ಲಿ ರಾಜೀನಾಮೆ ಕಳುಹಿಸುತ್ತೇನೆ ಎಂದಿದ್ದಾರೆ. ಅವರದ್ದೇನು ತೀರ್ಮಾನ ಇದೆಯೊ, ಒತ್ತಡ ಇದೆಯೊ, ಒತ್ತಡ ಮಾಡಿ ಕರೆದುಕೊಂಡು ಹೋಗಿದ್ದಾರೋ, ಅವರು ಏನು ಹೇಳಿಕೆ ಕೊಡ್ತಾರೋ ಕೊಡಲಿ. ಆಮೇಲೆ ಅದರ ಬಗ್ಗೆ ನಾವು ನಿರ್ಧರಿಸುತ್ತೇವೆ” ಎಂದು ಹೇಳಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!