Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಭಾರತದಲ್ಲಿ ‘ಡಿಜಿಟಲ್ ಸರ್ವಾಧಿಕಾರ’: ‘ಗ್ಲೋಬಲ್ ವಾಯ್ಸಸ್ ಅಡ್ವೋಕ್ಸ್’ ವರದಿ

ನವದೆಹಲಿ : ನಾಗರಿಕರಿಗೆ ಇಂಟರ್ನೆಟ್ ನಿರ್ಬಂಧ, ಸರಕಾರವನ್ನು ಟೀಕಿಸುವ ಪತ್ರಕರ್ತರನ್ನು ದೇಶದ ಶತ್ರುಗಳೆಂದು ಬ್ರಾಂಡ್ ಮಾಡುವುದು ಹಾಗೂ ರಾಜಕೀಯ ವಿರೋಧಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಮತ್ತು ಅವರನ್ನು ಖಳರೆಂಬಂತೆ ಬಿಂಬಿಸುವುದು ಇತ್ಯಾದಿ ರೂಪದೊಂದಿಗೆ ಭಾರತದಲ್ಲಿ ಡಿಜಿಟಲ್ ಸರ್ವಾಧಿಕಾರವು ತಲೆಯೆತ್ತಿದೆ ಎಂದು ಜಾಗತಿಕ ಸೆನ್ಸಾರ್ ವಿರೋಧಿ ಸಂಘಟನೆಯೊಂದು ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

‘ಗ್ಲೋಬಲ್ ವಾಯ್ಸಸ್ ಅಡ್ವೋಕ್ಸ್’ ಎಂಬ ನೆಟ್ವರ್ಕ್ ಆಗಸ್ಟ್ 4ರಂದು ಈ ವರದಿಯನ್ನು ಪ್ರಕಟಿಸಿತ್ತು. ಜನವರಿ 2022 ಹಾಗೂ ಮಾರ್ಚ್ 2023ರ ನಡುವೆ ದೇಶದಲ್ಲಿ ಕಂಡುಬಂದಿರುವ ಡಿಜಿಟಲ್ ಸರ್ವಾಧಿಕಾರದ ನಿದರ್ಶನಗಳನ್ನು ಸಂಶೋಧಕರು ಅಧ್ಯಯನ ನಡೆಸಿ ಈ ವರದಿ ತಯಾರಿಸಿದ್ದಾರೆ.

ಭಾರತ ಸೇರಿದಂತೆ 20 ರಾಷ್ಟ್ರಗಳು ಡಿಜಿಟಲ್ ಸರ್ವಾಧಿಕಾರ ಅನುಸರಿಸುವ ದೇಶಗಳ ಪಟ್ಟಿಯಲ್ಲಿವೆ ಎಂದು ವರದಿ ಹೇಳಿದೆ.

ಭಾರತವಲ್ಲದೆ ಇತರ 19 ದೇಶಗಳಾದ ಬ್ರೆಝಿಲ್, ಕ್ಯಾಮರೂನ್, ಈಕ್ವೆಡಾರ್, ಈಜಿಪ್ಟ್, ಎಲ್ ಸಲ್ವಡೋರ್, ಹಾಂಕಾಂಗ್, ಹಂಗೇರಿ, ಕಝಕಿಸ್ತಾನ, ಕೆನ್ಯಾ, ಕಿರ್ಗಿಝ್ಸ್ತಾನ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ರಶ್ಯ, ಸುಡಾನ್,ತಾಂಝಾನಿಯಾ,ಟರ್ಕಿ, ವೆನೆಝುವೆಲಾ ಹಾಗೂ ಝಿಂಬಾಬ್ವೆ ದೇಶಗಳಲ್ಲಿನ ಡಿಜಿಟಲ್ ಸರ್ವಾಧಿಕಾರ ಪ್ರವೃತ್ತಿಗಳ ಬಗೆಗೂ ಅಧ್ಯಯನ ನಡೆಸಲಾಗಿತ್ತು.

‘‘ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಪಕ್ಷವಾದ ಬಿಜೆಪಿ ಹಾಗೂ ಅದರ ಬೆಂಬಲಿಗರು ತಮ್ಮ ನೀತಿ, ನಿಲುವುಗಳ ಪ್ರಚಾರಕ್ಕೆ ಹಾಗೂ ಧಾರ್ಮಿಕ ಹಾಗೂ ರಾಜಕೀಯ ಅಲ್ಪಸಂಖ್ಯಾತರನ್ನು ಟ್ರೋಲ್ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ’’ ಎಂದು ವರದಿ ಹೇಳಿದೆ.

ಪೌರರು ಪ್ರತಿಭಟನೆಗಳನ್ನು ನಡೆಸಿದ ಹಲವಾರು ಸಂದರ್ಭಗಳಲ್ಲಿ ಅವರಿಗೆ ಇಂಟರ್ನೆಟ್ ಸಂಪರ್ಕವನ್ನು ನಿರಾಕರಿಸಲಾಗಿತ್ತು. ಇಂತಹ ನಿರ್ಬಂಧಗಳು ಮಾಹಿತಿ ಮುಕ್ತ ಹರಿವನ್ನು ಹೊಸಕಿಹಾಕುತ್ತದೆ ಹಾಗೂ ದುಬಾರಿ ಆರ್ಥಿಕ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.

‘‘ಸರಕಾರವನ್ನು ಟೀಕಿಸುವ ಪತ್ರಕರ್ತರಿಗೆ ದೇಶದ ಶತ್ರುಗಳೆಂಬ ವ್ಯಾಖ್ಯಾನವನ್ನು ಪ್ರಚಾರ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತವನ್ನೂ ಈ ವರದಿಯು ಸೇರ್ಪಡೆಗೊಳಿಸಿದೆ. ಇಂತಹ ವ್ಯಾಖ್ಯಾನವು ‘‘ದೇಶದಲ್ಲಿ ಮಾಧ್ಯಮಗಳ ಮುಚ್ಚುಗಡೆ, ಪತ್ರಕರ್ತರ ಬಂಧನ, ಕಣ್ಗಾವಲಿಗೆ ಸಮರ್ಥನೆ ಹಾಗೂ ಮಾಧ್ಯಮಗಳನ್ನು ನಿರ್ಬಂಧಿಸುವುದಕ್ಕೆ ಕಾರಣವಾಗಿದೆ’’ ಎಂದು ವರದಿ ಹೇಳಿದೆ.

ಆದಾಗ್ಯೂ, ಭಿನ್ನಮತವನ್ನು ಹತ್ತಿಕ್ಕಲು ಹಾಗೂ ವಿರೋಧಿ ಧ್ವನಿಗಳನ್ನು ಅಡಗಿಸುವುದನ್ನು ಸಮರ್ಥಿಸಲು ಭಾರತವು, ಅಭಿವ್ಯಕ್ತಿ ಸ್ವಾತಂತ್ರವೆಂಬುದು ಸಂಪೂರ್ಣವಾಗಿ ನೀಡಲ್ಪಟ್ಟ ಹಕ್ಕಲ್ಲವೆಂದು ವಾದಿಸುತ್ತಾ ಬಂದಿದೆ ಎಂದು ಗ್ಲೋಬಲ್ ವಾಯ್ಸಸ್ಅಡ್ವೊಕ್ಸ್ ಹೇಳಿದೆ.

ಭದ್ರತೆಯ ಕಾರಣವೊಡ್ಡಿ ಇಂಟರ್ನೆಟ್ ಮೇಲೆ ನಿಯಂತ್ರಣ ಸಾಧಿಸಲು ಸರಕಾರವು ಶಾಸನವನ್ನು ರೂಪಿಸಿದೆ ಎಂದು ವರದಿಯು ಹೇಳಿದೆ.

‘‘ಸರ್ವಾಧಿಕಾರಿ ಆಡಳಿತವು ಮಾಧ್ಯಮಗಳು ಹಾಗೂ ಸಂವಹನ ತಂತ್ರಜ್ಞಾನದ ಜೊತೆಗಿನ ನಂಟನ್ನು ಸಂಕೀರ್ಣಗೊಳಿಸಿದೆ. ತನ್ನ್ನನ್ನು ಟೀಕಿಸುವವರಿಗೆ ಇಂಟರ್ನೆಟ್ ನಿರ್ಬಂಧಿಸುವ ಸರಕಾರವು ತನ್ನ ಸಂದೇಶವನ್ನು ಹರಡಲು ಹಾಗೂ ಪ್ರಚಾರ ಉದ್ದೇಶಗಳಿಗಾಗಿ ಅದನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿದೆ ಎಂದು ಗ್ಲೋಬಲ್ ವಾಯ್ಸಸ್ ಅಡ್ವೋಕ್ಸ್ ಗಮನಸೆಳೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ