ಬೆಂಗಳೂರು : ಜನಸಂಕಲ್ಪ ಯಾತ್ರೆ ನಡುವೆ ಇದೇ ವಾರದಲ್ಲಿ ದಿಲ್ಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಅವಕಾಶ ಸಿಕ್ಕರೆ ವರಿಷ್ಠರ ಬಳಿ ಸಂಪುಟ ವಿಸ್ತರಣೆ ವಿಚಾರ ಪ್ರಸ್ತಾಪಿಸುವ ನಿರೀಕ್ಷೆಯಿದ್ದು, ಬಿಜೆಪಿಯಲ್ಲಿ ಚಟುವಟಿಕೆ ಗರಿಗೆದರಿದೆ.
ತಮ್ಮ ವಿರುದ್ಧ ಆರೋಪ ಕೇಳಿ ಬಂದ ಕಾರಣಕ್ಕೆ ರಮೇಶ್ ಜಾರಕಿಹೊಳಿ ಹಾಗೂ ಕೆ.ಎಸ್. ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ಈ ಇಬ್ಬರು ನಾಯಕರು ಮತ್ತೆ ಸಂಪುಟ ಸೇರಿದರೆ ತಾವು ದೋಷ ಮುಕ್ತರೆಂಬ ಸಂದೇಶ ರವಾನೆ ಯಾಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ ಎನ್ನ ಲಾಗಿದೆ. ವಿಧಾನ ಸಭೆ ಚುನಾವಣೆಗೆ ಆರು ತಿಂಗಳಷ್ಟೇ ಬಾಕಿಯಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಕ್ಷೀಣಿಸಿದೆ. ಆರೋಪಮುಕ್ತರಾದ ಸಂದೇಶ ರವಾನಿಸುವ ಚಿಂತನೆಯಲ್ಲಿರುವವರು, ಅಲ್ಪಾವಧಿಯಿದ್ದರೂ ಒಮ್ಮೆಯಾದರೂ ಸಚಿವರಾಗಬೇಕೆಂಬ ಹಂಬಲದಲ್ಲಿರುವವರಷ್ಟೇ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದಾರೆ.





