ಕಾರವಾರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನ ಮುತ್ಸದ್ದಿ ನಾಯಕ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಭೇಟಿಯಾಗಿರುವ ಫೊಟೊ ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಕುತೂಹಲ ಹಾಗೂ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ.
ದೇಶಪಾಂಡೆ ಸತತ ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯ ವಿಧಾನಸಭೆಯಲ್ಲಿಯೇ ಅತಿ ಹೆಚ್ಚು ಬಾರಿ ಆಯ್ಕೆಯಾದ ಶಾಸಕ ಎಂದೇ ಕರೆಸಿಕೊಂಡಿದ್ದಾರೆ. ಅಲ್ಲದೇ ಸರ್ಕಾರದ ವಿವಿಧ ಖಾತೆಗಳನ್ನ ನಿಭಾಯಿಸುವ ಮೂಲಕ ಉತ್ತಮ ಆಡಳಿತ ಕೊಟ್ಟಿದ್ದರು.
ದೇಶಪಾಂಡೆ ಅವರ ಹಿರಿತನ ಹಾಗೂ ಅನುಭವಕ್ಕೆ ಈ ಬಾರಿ ಸರ್ಕಾರದಲ್ಲಿ ದೊಡ್ಡ ಹುದ್ದೆಯೇ ಸಿಗಲಿದೆ ಎನ್ನಲಾಗಿತ್ತು. ಸಿಎಂ ಸಿದ್ದರಾಮಯ್ಯಗಿಂತ ಹೆಚ್ಚು ಬಾರಿ ವಿಧಾನಸಭೆ ಪ್ರವೇಶ ಮಾಡಿದ ಕೀರ್ತಿ ಹೊಂದಿದ್ದ ದೇಶಪಾಂಡೆ ಅವರಿಗೆ ಮಂತ್ರಿ ಸ್ಥಾನ ಪಕ್ಕಾ ಎನ್ನಲಾಗಿತ್ತು. ಪ್ರತಿ ಬಾರಿ ಸರ್ಕಾರ ರಚನೆಯಾಗುವ ವೇಳೆ ಸಚಿವರ ಪಟ್ಟಿಯಲ್ಲಿ ಮೊದಲ ಹೆಸರು ದೇಶಪಾಂಡೆ ಅವರದ್ದೇ ಇರುತ್ತಿತ್ತು. ಆದರೆ, ಅವರಿಗೆ ಸೂಕ್ತ ಸ್ಥಾನಮಾನ ಸಿಗದೇ ಇರುವುದರಿಂದ ಅವರನ್ನು ಬಿಜೆಪಿಗೆ ಸೆಳೆಯಲು ಅಮಿತ್ ಶಾ ಅವರು ಈ ಭೇಟಿ ಮಾಡಿರಬಹುದೇ ಎಂಬ ಊಹೆ ಮೂಡಿದೆ.
ಪುತ್ರನ ರಾಜಕೀಯ ಭವಿಷ್ಯ ಗಟ್ಟಿಗೊಳಿಸಲು ಈ ಭೇಟಿ? : ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಅವರ ರಾಜಕೀಯದ ಮೇಲೆ ಸದ್ಯ ದೇಶಪಾಂಡೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಪುತ್ರನನ್ನ ರಾಜಕೀಯವಾಗಿ ಜಿಲ್ಲೆಯಲ್ಲಿ ಪ್ರಬಲಗೊಳಿಸಬೇಕು ಎನ್ನುವುದು ದೇಶಪಾಂಡೆಯವರ ನಿಲುವು ಎನ್ನಲಾಗಿದೆ.
ಕೆಲ ದಿನದ ಹಿಂದೆ ಪ್ರಶಾಂತ್ ದೇಶಪಾಂಡೆ ಅವರ ಮಾವ ಪ್ರಫುಲ್ ಪಟೇಲ್ ಬಿಜೆಪಿ ಜೊತೆ ಕೈಜೋಡಿಸಿದ್ದರು. ಈ ವೇಳೆ ಸಾಕಷ್ಟು ಚರ್ಚೆಗಳು ಸಹ ನಡೆದಿದ್ದು, ಪ್ರಫುಲ್ ಪಟೇಲ್ ಮೂಲಕ ಪ್ರಶಾಂತ್ ಬಿಜೆಪಿ ಸೇರಿ ಈ ಬಾರಿ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಇದರ ನಡುವೆ ಪ್ರಶಾಂತ್ ಅವರ ತಂದೆ ದೇಶಪಾಂಡೆಯವರೇ ಅಮಿತ್ ಶಾ ಭೇಟಿ ಮಾಡಿರುವುದು ಪುತ್ರನ ರಾಜಕೀಯ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದಿದೆ.
ಪ್ರಹ್ಲಾದ್ ಜೋಷಿ ಉಪಸ್ಥಿತಿ : ದೇಶಪಾಂಡೆ, ಅಮಿತ್ ಶಾ ಭೇಟಿಯನ್ನು ಪ್ರಹ್ಲಾದ್ ಜೋಷಿಯವರೇ ನಿಗದಿಪಡಿಸಿದ್ದರೇ ಎಂದೆನ್ನತೊಡಗಿಸಿದೆ. ಭೇಟಿಯ ಫೋಟೋದಲ್ಲಿ ಅವರೂ ಇರುವುದು ಇದಕ್ಕೆ ಕಾರಣ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉಪಸ್ಥಿತಿಯೂ ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದೆ. ರಾಜ್ಯದ ಮಟ್ಟಿಗೆ ಸದ್ಯ ಪ್ರಹ್ಲಾದ್ ಜೋಷಿ ಪ್ರಭಾವಿ ನಾಯಕರಾಗಿದ್ದು, ಈ ಬಾರಿ ಒಂದೊಮ್ಮೆ ಬಿಜೆಪಿ ಸರ್ಕಾರ ಬಂದಿದ್ದರೆ ಪ್ರಹ್ಲಾದ್ ಜೋಷಿ ಸಿಎಂ ಆಗುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಬಿಜೆಪಿ ಹಿರಿಯ ಮುಖಂಡ ಬಿ.ಎಸ್ ಯಡಿಯೂರಪ್ಪನವರನ್ನ ಕಟ್ಟಿಹಾಕಿ ಪಕ್ಷ ಸಂಘಟಿಸಲು ಜೋಷಿ ಮುಂದಾಗಿದ್ದಾರೆ ಎನ್ನಲಾಗಿತ್ತು. ಸದ್ಯ ಕೇಂದ್ರ ಮಟ್ಟದಲ್ಲಿ ಪ್ರಹ್ಲಾದ್ ಜೋಷಿ ಅವರ ಮಾತಿಗೂ ಸಾಕಷ್ಟು ಬೆಲೆ ಇರುವ ಹಿನ್ನಲೆಯಲ್ಲಿ ಜೋಷಿ ಒಟ್ಟಿಗೆ ದೇಶಪಾಂಡೆ ಅಮಿತ್ ಶಾ ಭೇಟಿ ಸಾಕಷ್ಟು ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ.
ಸಿದ್ದರಾಮಯ್ಯ ಆಪ್ತರಾಗಿದ್ದರೂ ಮಂತ್ರಿ ಸ್ಥಾನವಿಲ್ಲ! : ಅಮಿತ್ ಶಾ ಹಾಗೂ ದೇಶಪಾಂಡೆಯವರ ರಹಸ್ಯ ಭೇಟಿಯ ಹಿಂದೆ, ದೇಶಪಾಂಡೆಯವರನ್ನು ಬಿಜೆಪಿಗೆ ಸೆಳೆಯುವ ಯೋಜನೆಯಿರಬಹುದೇ ಎಂಬ ಪ್ರಶ್ನೆ ಕಾಡುವುದು ಸಹಜ. ಏಕೆಂದರೆ, ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದಾಗ ಸರ್ಕಾರದಲ್ಲಿ ಅನುಭವಿ ಮಂತ್ರಿಗಳು ಇರಬೇಕು ಎಂದು ಸ್ವತಃ ಸಿದ್ದರಾಮಯ್ಯನವರೇ ದೇಶಪಾಂಡೆ ಅವರನ್ನ ಮಂತ್ರಿ ಮಾಡಲು ಸೂಚಿಸಿದ್ದರು.
ಆದರೆ, ಈ ಬಾರಿ ಹಾಗಾಗಿಲ್ಲ. ಸಿದ್ದರಾಮಯ್ಯ ಅವರ ಆಪ್ತರಲ್ಲಿ ದೇಶಪಾಂಡೆ ಸಹ ಒಬ್ಬರಾಗಿದ್ದರೂ ಈ ಬಾರಿ ಸರ್ಕಾರ ರಚನೆಯಲ್ಲಿ ದೇಶಪಾಂಡೆ ಅವರ ಹೆಸರನ್ನ ಮಂತ್ರಿ ಪಟ್ಟಿಯಿಂದ ಕೈ ಬಿಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ಮಂಕಾಳ ವೈದ್ಯರಿಗೆ ನೀಡಲಾಯಿತು.
ಈ ರೀತಿಯಾಗಿ ದೇಶಪಾಂಡೆ ಅವರನ್ನು ಕಡೆಗಣಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹಿರಿಯ ಶಾಸಕರನ್ನು ಬಿಟ್ಟು ಸರ್ಕಾರ ಬೇರೆಯವರನ್ನ ಮಂತ್ರಿ ಮಾಡಿದರೆ ಗುಣಮಟ್ಟದ ಆಡಳಿತ ಕೊಡಲು ಸಾಧ್ಯವೇ ಎನ್ನುವ ಚರ್ಚೆ ಒಂದೆಡೆಯಾದರೆ, ಇನ್ನೊಂದೆಡೆ ಜಾತಿ ಕೋಟಾದಡಿ ಬ್ರಾಹ್ಮಣ ಸಮುದಾಯಕ್ಕೆ ದಿನೇಶ್ ಗುಂಡೂರಾವ್ ಗೆ ಸ್ಥಾನ ನೀಡಿದ್ದರಿಂದ ದೇಶಪಾಂಡೆ ಅವರಿಗೆ ಸಚಿವ ಸ್ಥಾನವನ್ನ ಕೈ ಬಿಡಲಾಗಿದೆ ಎನ್ನಲಾಗಿತ್ತು.
ಹಾಲಿ ಸರ್ಕಾರದಲ್ಲಿ ದೇಶಪಾಂಡೆ ಸಚಿವರೂ ಅಲ್ಲ. ಒಂದೊಮ್ಮೆ ಸಚಿವರಾಗಿದ್ದರೆ ರಾಜ್ಯದ ಅನುದನ ಇನ್ನಿತರ ವಿಚಾರದ ಚರ್ಚೆಗಳ ಕುರಿತು ದೇಶಪಾಂಡೆ ಭೇಟಿ ಮಾಡಿರಬಹುದು ಎನ್ನಬಹುದಿತ್ತು. ಆದರೆ ಶಾಸಕರಾಗಿದ್ದರೂ ದೇಶಪಾಂಡೆ ಅಮಿತ್ ಶಾ ಅವರನ್ನ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.





