ಹಿಂಡೆನ್‌ಬರ್ಗ್‌ನ ವರದಿಯಲ್ಲಿ ಉಲ್ಲೇಖಿಸಿದ ಕೆಲವು ವಹಿವಾಟುಗಳ ವಿಚಾರವನ್ನು ಮುಂದಿಟ್ಟುಕೊಂಡು ಅದಾನಿ ಪೋರ್ಟ್ಸ್ ಲೆಕ್ಕಪರಿಶೋಧಕ ಸ್ಥಾನಕ್ಕೆ ರಾಜೀನಾಮೆ ನೀಡಲು ಡೆಲಾಯ್ಟ್ ನಿರ್ಧರಿಸಿದೆ. ಹಿಂಡನ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಅದಾನಿ ಸ್ವತಂತ್ರವಾಗಿ ಪರಿಶೀಲಿಸಲು ಬಯಸುತ್ತಿಲ್ಲ ಎಂಬುದೇ ಡೆಲಾಯ್ಟ್ ರಾಜೀನಾಮೆಗೆ ಕಾರಣ ಎಂದು ಈ ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಗಳು ಹೇಳಿದ್ದಾರೆ.
ಆದರೆ, ಈ ಬಗ್ಗೆ ರಾಯ್ಟರ್ಸ್ ಪ್ರತಿಕ್ರಿಯೆ ಕೋರಿದಾಗ ಡೆಲಾಯ್ಟ್ ಮತ್ತು ಅದಾನಿ ಪೋರ್ಟ್ಸ್ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಿಂಡೆನ್‌ಬರ್ಗ್ ಉಲ್ಲೇಖಿಸಿದ ಸಂಬಂಧಿತ ವಹಿವಾಟಿನ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಡೆಲಾಯ್ಟ್ ಅದಾನಿ ಪೋರ್ಟ್ಸ್‌ಗೆ ಸೂಚಿಸಿದ ನಂತರ ರಾಜೀನಾಮೆ ಸುದ್ದಿ ಹೊರಬಿದ್ದಿದೆ. ಆದರೆ, ಕಂಪನಿಯು ಸ್ವತಂತ್ರ ತನಿಖೆಗೆ ಒಪ್ಪಲಿಲ್ಲ ಎಂದು ಮೂಲಗಳು ತಿಳಿಸಿವೆ.
ಅದಾನಿ ಪೋರ್ಟ್ಸ್ ಲೆಕ್ಕಪರಿಶೋಧಕ ಹುದ್ದೆಗೆ ತುರ್ತಾಗಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದ್ದು, ಡೆಲಾಯ್ಟ್ ಸೋಮವಾರವೇ ತನ್ನ ನಿರ್ಧಾರ ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.
ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯು ಹೂಡಿಕೆದಾರರ ವಿಶ್ವಾಸವನ್ನು ಜರ್ಝರಿತಗೊಳಿಸಿತ್ತು. ಇದರಿಂದ ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಮೌಲ್ಯ ಸುಮಾರು 150 ಬಿಲಿಯನ್ ಡಾಲರ್‌ಗಳಷ್ಟು ಕುಸಿತ ಕಂಡಿತ್ತು.
ಆದರೆ, ನಂತರ ಸಮೂಹದ ಕಂಪನಿಗಳ ಷೇರುಗಳು ಗಳಿಕೆ ಕಂಡಿವೆ. ಹೀಗಿದ್ದೂ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ನಂತರ ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಮೌಲ್ಯ ಇನ್ನೂ ಸುಮಾರು 100 ಬಿಲಿಯನ್ ಡಾಲರ್‌ಗಳಷ್ಟು ಕಡಿಮೆಯೇ ಇದೆ.
ಬ್ಲೂಮ್‌ಬರ್ಗ್ ನ್ಯೂಸ್ ಶುಕ್ರವಾರ ಡೆಲಾಯ್ಟ್‌ನ ಯೋಜನೆಗಳ ಬಗ್ಗೆ ಮೊದಲು ವರದಿ ಮಾಡಿತ್ತು.