Mysore
26
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಮೋದಿ ಅಮೆರಿಕ ಭೇಟಿಗೆ ಮುನ್ನವೇ ಪ್ರೆಡೇಟರ್‌ ಡ್ರೋನ್‌ ಖರೀದಿಗೆ ರಕ್ಷಣಾ ಇಲಾಖೆ ಅಸ್ತು

ನವದೆಹಲಿ: ಜೂನ್‌ 21ರಿಂದ 24ರವರಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಅಮೆರಿಕ ಪ್ರವಾಸಕ್ಕೆ ಸಿದ್ಧತೆ ನಡುವೆಯೇ, ಅಮೆರಿಕದಿಂದ ಅತ್ಯಾಧುನಿಕ ‘ಪ್ರೆಡೇಟರ್‌ ಡ್ರೋನ್‌'(ಎಂಕ್ಯೂ-9ಬಿ) ಖರೀದಿಸುವ ಒಪ್ಪಂದಕ್ಕೆ ರಕ್ಷಣಾ ಇಲಾಖೆ ಗುರುವಾರ ಹಸಿರು ನಿಶಾನೆ ತೋರಿದೆ.

ಭದ್ರತೆ ಕುರಿತಾದ ಸಂಪುಟ ಸಮಿತಿ (ಸಿಸಿಎಸ್‌) ಅನುಮೋದನೆ ಮುದ್ರೆ ದೊರೆತ ಕೂಡಲೇ ಒಪ್ಪಂದ ಅಂತಿಮಗೊಳ್ಳಲಿದೆ. “ಪ್ರೆಡೇಟರ್‌ ಡ್ರೋನ್‌ ಖರೀದಿ ಒಪ್ಪಂದಕ್ಕೆ ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಂಪುಟ ಸಮಿತಿಯ ಹಸಿರು ನಿಶಾನೆಯೊಂದೇ ಬಾಕಿಯಿದೆ. ಅಗತ್ಯ ಪ್ರಕ್ರಿಯೆಗಳು ಮುಗಿದ ಬಳಿಕ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ,” ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ನೌಕಾಪಡೆ ಬತ್ತಳಿಕೆಗೆ 15

ಭಾರತೀಯ ನೌಕಾಪಡೆಯು ಈ ಒಪ್ಪಂದದ ಪ್ರಮುಖ ಭಾಗೀದಾರ ಸಂಸ್ಥೆಯಾಗಿದೆ. ತನ್ನ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಕಣ್ಗಾವಲು ಕಾರ್ಯಾಚರಣೆಗಾಗಿ 15 ಡ್ರೋನ್‌ಗಳನ್ನು ನೌಕಾಪಡೆ ಪಡೆಯಲಿದೆ. ಇತರೆ ಎರಡು ಪಡೆಗಳೂ ಇದೇ ರೀತಿಯ ಮಧ್ಯಮ ಎತ್ತರದಲ್ಲಿ ಹಾರುವ ಹಾಗೂ ಸುದೀರ್ಘ ಹಾರಾಟ ಸಾಮರ್ಥ್ಯ ಹೊಂದಿರುವ ಡ್ರೋನ್‌ಗಳನ್ನು ಬತ್ತಳಿಕೆಗೆ ಸೇರಿಸಿಕೊಳ್ಳುವ ಯೋಜನೆ ಹೊಂದಿವೆ. ಒಟ್ಟು 30 ಡ್ರೋನ್‌ಗಳನ್ನು ಖರೀದಿಸಲು ಭಾರತ ಯೋಜಿಸಿದೆ.

ಜೋ ಬೈಡೆನ್‌ ಒತ್ತಡ

ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಗೂ ಮುನ್ನ ಒಪ್ಪಂದ ಅಂತಿಮಗೊಳಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಅಲ್ಲಿನ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

ಪ್ರೆಡೇಟರ್‌ ವಿಶೇಷತೆಯೇನು?

* ಇದು ಜಗತ್ತಿನಲ್ಲೇ ಅತ್ಯಂತ ಸೈಲೆಂಟ್‌ ಮತ್ತು ಪವರ್‌ಫುಲ್‌ ಡ್ರೋನ್‌.

* ದಾಳಿ ಮಾಡುವವರೆಗೂ ಡ್ರೋನ್‌ ಶತ್ರುಗಳ ತಲೆಯ ಮೇಲೆ ಹಾರಿದರೂ ತಿಳಿಯುವುದೇ ಇಲ್ಲ. ದಾಳಿಯ ಸೂಚನೆ ಸಿಕ್ಕಾಗ ತನ್ನಲ್ಲಿರುವ ಕ್ಷಿಪಣಿಯನ್ನು ಚಿಮ್ಮಿಸಿ ಗುರಿಯನ್ನು ಧ್ವಂಸಗೊಳಿಸುತ್ತದೆ.

* ಅಪಘಾನಿಸ್ತಾನದ ಕಾಬೂಲ್‌ ಬಳಿ ಅಜ್ಞಾತ ಸ್ಥಳದಲ್ಲಿ ಅಡಗಿದ್ದ ಅಲ್‌ ಖಾಯಿದಾ ನಾಯಕ ಅಲ್‌ ಜವಾಹಿರಿ ಹತ್ಯೆಗೆ ಅಮೆರಿಕ ಇದೇ ಡ್ರೋನ್‌ ಬಳಸಿತ್ತು.

* ಅಮೆರಿಕ ಈ ಡ್ರೋನ್‌ ಅನ್ನು ‘ಹಂಟರ್‌ ಕಿಲ್ಲರ್‌ ಯುಎವಿ’ ಎಂತಲೂ ಕರೆಯುತ್ತದೆ. ದೀರ್ಘಕಾಲದವರೆಗೆ ಹಾರಾಡುವ ಸಾಮರ್ಥ್ಯವಿರುವ ಈ ಡ್ರೊನ್‌, ಗಾಳಿಯಿಂದ ನೆಲಕ್ಕೆ ಅಪ್ಪಳಿಸುವ ಕ್ಷಿಪಣಿಗಳನ್ನು ಹೊಂದಿರುತ್ತದೆ. 50 ಸಾವಿರ ಅಡಿ ಎತ್ತರದಿಂದ ದಾಳಿ ಮಾಡಬಲ್ಲದು.

* ಅಮೆರಿಕದ ಜನರಲ್‌ ಮೋಟಾರ್ಸ್‌ ಅಭಿವೃದ್ಧಿ ಪಡಿಸಿರುವ ಈ ಡ್ರೋನ್‌ 2,223 ಕೆ.ಜಿ ತೂಕವಿದ್ದು, 36.1 ಅಡಿ ಉದ್ದವಿದೆ. ರೆಕ್ಕೆಗಳೂ ಸೇರಿ 65.7 ಅಡಿ ಅಗಲವಿದೆ. 12.6 ಅಡಿ ಎತ್ತರವಿದೆ. 1,800 ಕೆಜಿ ಇಂಧನವನ್ನು ಇದರಲ್ಲಿ ತುಂಬಿಸಬಹುದು. ಗಂಟೆಗೆ 482 ಕಿ.ಮೀ. ವೇಗದಲ್ಲಿ ಸಾಗಬಲ್ಲದು.

* ಕಣ್ಗಾವಲು, ಗುಪ್ತಚರ, ಮಾಹಿತಿ ಕಲೆಹಾಕುವುದು ಹಾಗೂ ದಾಳಿ ಮುಂತಾದ ಕೆಲಸಗಳನ್ನು ಸದ್ದಿಲ್ಲದೆ ಮಾಡಬಲ್ಲುದು. ಮಾನವರಹಿತವಾಗಿರುವ ಕಾರಣ, ಗುಪ್ತಸ್ಥಳದಲ್ಲಿ ನಿಂತು ದಾಳಿಯನ್ನು ನಿರ್ವಹಣೆ ಮಾಡಬಹುದು. ಇಬ್ಬರು ಆಪರೇಟರ್‌ಗಳು ನೆಲದಿಂದಲೇ ಇದನ್ನು ನಿರ್ವಹಣೆ ಮಾಡಬಹುದು.

* 1,900 ಕಿ.ಮೀ. ದೂರ ಹಾರಾಟ ವ್ಯಾಪ್ತಿ ಹೊಂದಿದೆ. 1,700 ಕೆಜಿಯಷ್ಟು ತೂಕದ ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!