ಬೆಂಗಳೂರು : ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಎಂಟು ಭಾರತೀಯರಿಗೆ ಕತಾರ್ ಆಡಳಿತ ಮರಣದಂಡನೆ ವಿಧಿಸಿರುವುದು ಆಘಾತಕಾರಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ನಿವೃತ್ತ ಅಧಿಕಾರಿಗಳನ್ನು ವಾಪಸ್ ಕರೆತರಲು ಕತಾರ್ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ತಕ್ಷಣ ಕಾರ್ಯನಿರ್ವಹಿಸುತ್ತಾರೆ ಎಂದು ತರೂರ್ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ, ಇಡೀ ಪ್ರಕರಣದ ವಿವರಗಳು ನಿಗೂಢ ಮತ್ತು ಅಪಾರದರ್ಶಕತೆಯಿಂದ ಮುಚ್ಚಿಹೋಗಿವೆ ಎಂದು ಹೇಳಿದರು.
ಬಂಧನಕ್ಕೊಳಗಾಗಿರುವ ಎಂಟು ಮಂದಿ ನೌಕಾಪಡೆಯ ಮಾಜಿ ಯೋಧರು ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದು ಒಮಾನ್ ಏರ್ ಫೋರ್ಸ್ ಅಧಿಕಾರಿಯ ಖಾಸಗಿ ಸಂಸ್ಥೆಯಾಗಿದ್ದು, ಕತಾರ್‌ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತದೆ. ಎಂಟು ಭಾರತೀಯರ ಬಂಧನದ ನಂತರ, ಕಂಪನಿಯನ್ನು ಮುಚ್ಚಲಾಗಿದೆ.
ಕತಾರ್‌ನಲ್ಲಿ ಮರಣದಂಡನೆಗೆ ಒಳಗಾದ 8 ಭಾರತೀಯರಲ್ಲಿ ಏಳು ಮಂದಿ ಭಾರತೀಯ ನೌಕಾಪಡೆಯಲ್ಲಿ ಮಾಜಿ ಅಧಿಕಾರಿಗಳು. ಅಲ್ ದಹ್ರಾ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಪೂರ್ಣೇಂದು ತಿವಾರಿ ಅವರಿಗೆ ನಾಲ್ಕು ವರ್ಷಗಳ ಹಿಂದೆ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು. ಅನಿವಾಸಿ ಭಾರತೀಯ ಮೂಲದ ವ್ಯಕ್ತಿಗಳಿಗೆ ಇದು ಅತ್ಯುನ್ನತ ಗೌರವವಾಗಿದೆ. ಪೂರ್ಣೇಂದು ತಿವಾರಿ ಅವರು ಭಾರತೀಯ ಸಶಸ್ತ್ರ ಪಡೆಗಳಿಂದ ಇದನ್ನು ಪಡೆದ ಮೊದಲಿಗರಾಗಿದ್ದಾರೆ.





