Mysore
20
overcast clouds
Light
Dark

ಅಮೆರಿಕದಲ್ಲಿ ದಾವಣಗೆರೆ ದಂಪತಿ ನಿಗೂಢ ಸಾವು ಪ್ರಕರಣ : ಪತ್ನಿ-ಮಗುವಿಗೆ ಗುಂಡು ಹಾರಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ

ದಾವಣಗೆರೆ : ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ ನಿಗೂಢ ಸಾವಿನ ವಿಚಾರ ಇದೀಗ ಬಹಿರಂಗಗೊಂಡಿದ್ದು, ಪುತ್ರ ಹಾಗೂ ಪತ್ನಿಯನ್ನು ಗುಂಡಿಕ್ಕಿ ಕೊಂದು ಬಳಿಕ ಪತಿಯೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಹೊರ ಬಿದ್ದಿದೆ.

ಮೃತ ಯೋಗೇಶ್ ಹೊನ್ನಾಳ ದಾವಣಗೆರೆ ಜಿಲ್ಲೆಯ ಜಗಳೂರು (Jagaluru) ತಾಲೂಕಿನ ಹಾಲೆಕಲ್ಲು ಗ್ರಾಮದವರಾಗಿದ್ದು, ಎಂಜಿನಿಯರ್ ಪದವಿ ಪಡೆದಿದ್ದರು. ಪತ್ನಿ ಪ್ರತಿಭಾ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 9 ವರ್ಷದ ಹಿಂದೆ ವಿವಾಹವಾಗಿತ್ತು. ದಂಪತಿಗೆ ಯಶ್ ಎಂಬ 6 ವರ್ಷದ ಮಗ ಕೂಡಾ ಇದ್ದ. ಇಬ್ಬರ ಬದುಕು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ದಂಪತಿ ಯಾರೂ ಮನೆಯಿಂದ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆ ಬಳಿ ಬಂದು ಗಮನಿಸಿದಾಗ ಪೊಲೀಸರಿಗೆ ಮೂವರು ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಬೆಂಗಳೂರಿನಲ್ಲಿ ಇದ್ದ ಯೋಗೇಶ್ ಸಹೋದರನಿಗೆ ಫೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸಹೋದರ ದಾವಣಗೆರೆಯ ವಿದ್ಯಾನಗರದಲ್ಲಿ ವಾಸವಾಗಿರುವ ಯೋಗೇಶ್ ತಾಯಿ ಶೋಭಾ ಮತ್ತು ಪ್ರತಿಭಾಳ ತಂದೆ ಅಮರ್‌ನಾಥ್‌ಗೆ ವಿಷಯ ಮುಟ್ಟಿಸಿದ್ದಾರೆ.

ಆದರೆ ಬಾಲ್ಟಿಮೋರ್ ಕೌಂಟಿ ಪೊಲೀಸರು ಪ್ರಾಥಮಿಕ ಹೇಳಿಕೆ ಬಿಡುಗಡೆ ಮಾಡಿದ್ದು, ಪತಿ ಮತ್ತು ಪತ್ನಿಯ ನಡುವಿನ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ. ಪುತ್ರ ಯಶ್ ಹಾಗೂ ಪತ್ನಿ ಪ್ರತಿಭಾಳ ಹತ್ಯೆ ನಡೆಸಿ ನಂತರ ಪತಿ ಯೋಗೇಶ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ. ಆಗಸ್ಟ್ 15ರಂದು ರಾತ್ರಿ ಘಟನೆ ನಡೆದಿರಬಹುದು ಎಂದು ಊಹಿಸಲಾಗಿದ್ದು, ಆಗಸ್ಟ್ 18ರಂದು ಬಾಲ್ಟಿಮೋರ್ ಪೊಲೀಸರಿಂದ ಘಟನೆ ಕುರಿತು ಮಾಹಿತಿ ಹೊರಬಿದ್ದಿತ್ತು.

ಮೂರು ಜನರ ಮೃತದೇಹವನ್ನು ದಾವಣಗೆರೆಗೆ ತರಿಸಬೇಕು ಎಂದು ಯೋಗೇಶ್ ತಾಯಿ ಶೋಭಾ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಇವರ ಮನವಿಯನ್ನು ವಿದೇಶಾಂಗ ಸಚಿವಾಲಯಕ್ಕೆ ರವಾನೆ ಮಾಡಿದ್ದಾರೆ. ಅಲ್ಲದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಕುಟುಂಬದ ಕೋರಿಕೆ ಮೇರೆಗೆ ಅಮೆರಿಕದಲ್ಲಿರುವ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟಿ ಜನರಲ್ ವರುಣ್ ಅವರನ್ನು ಆನ್‌ಲೈನ್ ಮುಖಾಂತರ ಸಂಪರ್ಕ ಮಾಡಿದ್ದೇವೆ. ಅಲ್ಲದೇ ಕೌನ್ಸಿಲ್ ಮಾಹಿತಿ ರವಾನೆ ಮಾಡಲಾಗಿದೆ. ಮೃತದೇಹವನ್ನು ದಾವಣಗೆರೆಗೆ ತರುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ