ನವದೆಹಲಿ : ಕರ್ನಾಟಕ ಸರ್ಕಾರದಿಂದ ಮುಂದಿನ 15 ದಿನಗಳವರೆಗೆ ಪ್ರತಿದಿನ ತಲಾ 2,600 ಕ್ಯೂಸೆಕ್ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿ ನೀರಿಲ್ಲದೇ ರೈತರು ಗೋಳಾಡುತ್ತಿದ್ದಾರೆ. ಬರದ ನಡುವೆಯೂ ಕಾವೇರಿ ಕೊಳ್ಳದ ರೈತರು ಹಾಗೂ ಸಾರ್ವಜನಿಕರಿಗೆ ಹೊರೆಯಾಗುವಂತೆ ಕರ್ನಾಟಕದಿಂದ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ಹೊರಡಿಸಿದೆ.
ನವದೆಹಲಿಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸೋಮವಾರ ನಡೆಸಿದ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಹಾಗೂ ತಮಿಳುನಾಡು ವಾದವನ್ನು ಆಲಿಸಿದ ಸಿಡಬ್ಲ್ಯೂಆರ್‌ಸಿ ಕರ್ನಾಟಕದ ಕಾವೇರಿ ನದಿಯಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 2,6000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದೆ. ಈ ಮೂಲಕ ಸಂಕಷ್ಟದಲ್ಲಿದ್ದ ಕರ್ನಾಟಕ ಜನತೆಗೆ ಪುನಃ ಸಿಡಬ್ಲ್ಯೂಆರ್‌ಸಿ ಶಾಕ್ ನೀಡಿದೆ.
ಕರ್ನಾಟಕದಲ್ಲಿ ಈ ವರ್ಷ ಬರಗಾಲ ಆವರಿಸಿದ್ದು, ಈಗಾಗಲೇ ರಾಜ್ಯ ಸರ್ಕಾರದಿಂದ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿ ಕೇಂದ್ರ ಸರ್ಕಾರದ ಬಾಗಿಲಿಗೆ ಹೋಗಿ ಬರಗಾಲದ ಪರಿಹಾರ ಹಣ ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ. ಮತ್ತೊಂದೆಡೆ ಕನ್ನಡ ನಾಡಿನ ಜೀವನದಿಯಾದ ಕಾವೇರಿ ನದಿ ಈ ವರ್ಷ ಭರ್ತಿಯಾಗಿಲ್ಲ. 100 ಅಡಿಗಿಂತ ಕಡಿಮೆ ನೀರು ಸಂಗ್ರಹವಿದ್ದರೂ ತಮಿಳುನಾಡು ಮಾತ್ರ ನೀರಿನ ವಿಚಾರದಲ್ಲಿ ಕ್ಯಾತೆ ತೆಗೆದು ಸಾಮಾನ್ಯ ಮಳೆ ಬಂದ ವರ್ಷದಲ್ಲಿ ನೀರು ಹರಿಸುವಂತೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸಬೇಕು ಎಂದು ವಾದ ಮಾಡುತ್ತಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ರಚಿಸಲಾದ ಕಾವೇರಿ ನೀರು ನಿಯಂತ್ರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಪ್ರತಿ 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಿ ನೀರು ಬಿಡುವ ವಿಚಾರಕ್ಕೆ ಕರ್ನಾಟಕಕ್ಕೆ ಆದೇಶ ನೀಡಲಾಗುತ್ತಿದೆ. ಈಗ ಸೋಮವಾರ ಬೆಳಗ್ಗೆಯಿಂದ ಕಾವೇರಿ ನದಿ ನೀರು ಹಂಚಿಕೆ ಕುರರಿತು ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣಾ ಸಮಿತಿಯು ಕರ್ನಾಟಕದಿಂದ ನೀರು ಹರಿಸಲು ಆದೇಶವನ್ನು ಹೊರಡಿಸಿದೆ.
5,000ಕ್ಯೂಸೆಕ್‌ನಿಂದ 2,600 ಕ್ಯೂಸೆಕ್‌ಗೆ ಇಳಿಕೆ: ಕರ್ನಾಟಕದಲ್ಲಿ ತೀವ್ರ ಬರಗಾಲ ಆವರಿಸಿದ್ದು ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶರುವಾಗಿದೆ. ಜೊತೆಗೆ, ಮಂಡ್ಯ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ನರಂತರವಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ರೈತರಿಂದ ಧರಣಿ ಮಾಡಲಾಗುತ್ತಿದೆ. ಆದರೂ ಕೂಡ ಕನ್ನಡಿಗರಿಗೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ. ಬರಗಾಲದ ನಡುವೆಯೂ ಕಳೆದೊಂದು ತಿಂಗಳ ಹಿಂದೆ ತಲಾ 5,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಲಾಗಿತ್ತು. ಇದನ್ನು 3,000 ಕ್ಯೂಸೆಕ್ಸ್‌ಗೆ ತಗ್ಗಿಸಲಾಗಿತ್ತು. ಈಗ ಮತ್ತಷ್ಟು ನೀರನ್ನು ತಗ್ಗಿಸಿ ಪ್ರತಿದಿನ 2,600 ಕ್ಯೂಸೆಕ್ ನೀರನ್ನು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಶಿಫಾರಸು ಮಾಡಿವೆ.