Mysore
20
overcast clouds
Light
Dark

ಮೋದಿ, ಅಮಿತ್ ಶಾ ಕುರಿತಾದ ವಿಡಿಯೋ ಹಂಚಿಕೊಂಡ ಕಾಂಗ್ರೆಸ್: ರಾಹುಲ್ ಗಾಂಧಿ ಬಗ್ಗೆ ಹೇಳಿದ್ದೇನು?

ಬೆಂಗಳೂರು: 2024 ರ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಪ್ರಾರಂಭಿಸಿವೆ. ಮಂಗಳವಾರ ಅನಿಮೇಟೆಡ್ ವಿಡಿಯೋವನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿ ವಿಭಜನೆಯ ತಂತ್ರಗಳನ್ನು ಹೂಡುತ್ತಿದೆ ಮತ್ತು ರಾಹುಲ್ ಗಾಂಧಿ ‘ನಫ್ರತ್ ಕಾ ಬಜಾರ್’ ಅನ್ನು ತೊಡೆದುಹಾಕಿ ಅದನ್ನು ‘ಮೊಹಬ್ಬತ್ ಕಿ ದುಕಾನ್’ ನೊಂದಿಗೆ ಬದಲಾಯಿಸುತ್ತಿದ್ದಾರೆ ಎಂಬ ಸಂದೇಶ ಸಾರಿದೆ.

ಬಿಜೆಪಿಯು ಒಂದು ಚಿಕ್ಕ ಆನಿಮೇಟೆಡ್ ವಿಡಿಯೋವನ್ನು ಬಿಡುಗಡೆ ಮಾಡಿದ ತಿಂಗಳ ನಂತರ ಬಂದಿರುವ ಕಾಂಗ್ರೆಸ್‌ನ ವಿಡಿಯೋ, ತನ್ನ ಭಾರತ್ ಜೋಡೋ ಯಾತ್ರೆಯ ಮೂಲಕ ರಾಹುಲ್ ಗಾಂಧಿಯವರು ದೇಶವನ್ನು ಒಂದುಗೂಡಿಸುವ ಅಂಶವೆಂದು ಬಿಂಬಿಸುತ್ತದೆ.

ಕರ್ನಾಟಕ ಕಾಂಗ್ರೆಸ್ ಈ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನಗಳ ಮೌಲ್ಯಗಳನ್ನು ನಾಶ ಮಾಡಿ, ದ್ವೇಷವನ್ನು ಬಿತ್ತಿ, ಸರ್ವಾಧಿಕಾರವನ್ನು ಸ್ಥಾಪಿಸಲು ಹೊರಟಿರುವ ಬಿಜೆಪಿಯ ಪ್ರಯತ್ನಗಳನ್ನು ಪ್ರೀತಿ, ಸಹಬಾಳ್ವೆಯ ಸಂದೇಶಗಳ ಮೂಲಕ ರಾಹುಲ್ ಗಾಂಧಿ ಅವರು ಸೋಲಿಸಲಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ ಎಂದು ಬರೆದಿದೆ.

1:43 ನಿಮಿಷಗಳ ವೀಡಿಯೊದಲ್ಲಿ, ಪ್ರಧಾನಿ ಮೋದಿಯವರ ಅನಿಮೇಟೆಡ್ ಪಾತ್ರವು ವಾಹನದ ಮೇಲೆ ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ಅಧಿಕಾರವನ್ನು ಹಿಡಿತದಲ್ಲಿಟ್ಟುಕೊಂಡು ರಥವನ್ನು ಓಡಿಸುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ಹಿಂದೂ ಮತ್ತು ಮುಸ್ಲಿಂ ವ್ಯಕ್ತಿಗಳ ನಡುವೆ ಬಿರುಕು ಉಂಟುಮಾಡುವ ಮತ್ತು ರಾಹುಲ್ ಗಾಂಧಿ ಪ್ರವೇಶಿಸಿ ಎರಡು ಸಮುದಾಯಗಳ ವ್ಯಕ್ತಿಗಳನ್ನು ಒಗ್ಗೂಡಿಸುವ ಅನಿಮೇಟೆಡ್ ಪಾತ್ರವನ್ನು ವಿಡಿಯೋ ತೋರಿಸುತ್ತದೆ.

ಭಾರತ್ ಜೋಡೋ ಯಾತ್ರೆಯ ಮೂಲಕ ಜನರನ್ನು ಒಗ್ಗೂಡಿಸುತ್ತಾ ರಾಹುಲ್ ಗಾಂಧಿ ನಡೆದುಕೊಂಡು ಹೋಗುವ, ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ಚಿತ್ರಣಗಳನ್ನು ಕಟ್ಟಿಕೊಡಲಾಗಿದೆ. ರಾಹುಲ್ ಗಾಂಧಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸುತ್ತದೆ ಮತ್ತು ಅವರು ‘ನಫ್ರತ್ ಕಾ ಬಜಾರ್’ ಬೋರ್ಡ್ ಅನ್ನು ಹಾದುಹೋಗುವಾಗ, ಅದು ಕೆಳಗೆ ಬೀಳುತ್ತದೆ ಮತ್ತು ‘ಮೊಹಾಬತ್ ಕಿ ದುಕಾನ್’ ಹಿನ್ನೆಲೆಯಲ್ಲಿರುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ