ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಬಿಜೆಪಿ, ಜೆಡಿಎಸ್ ರಣತಂತ್ರ ರೂಪಿಸುತ್ತಿವೆ. ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ. ವರುಣಾದಲ್ಲಿ ಯಾರೇ ಎದುರಾಳಿ ನಿಂತರೂ ನನಗೆ ತೊಂದರೆ ಇಲ್ಲ. ಯಾರು ಯಾರನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯಾರನ್ನೂ ಯಾವ ಕ್ಷೇತ್ರದಲ್ಲೂ ಯಾರು ಕಟ್ಟಿ ಹಾಕಲು ಆಗಲ್ಲ. ಕಟ್ಟಿ ಹಾಕೋದು ಮತ್ತೊಂದು ನಾಯಕರ ಕೈಯಲ್ಲಿ ಇಲ್ಲ. ಮತದಾರ ಮಾತ್ರ ಆ ಕೆಲಸ ಮಾಡಬಹುದು ಅಷ್ಟೇ. ಸೋಲಿಸುವುದು, ಗೆಲ್ಲಿಸುವುದು ಜನರ ಕೈಯಲ್ಲಿದೆ. ನಾನು ವರುಣಾಕ್ಕೆ ಈಗಲೂ ಪ್ರಚಾರಕ್ಕೆ ಹೋಗುವುದಿಲ್ಲ. ನಾಮಪತ್ರ ಸಲ್ಲಿಕೆಗೆ ಮಾತ್ರ ಹೋಗುತ್ತೇನೆ. ನನ್ನ ಮಗ ಯತೀಂದ್ರ ಶಾಸಕ ಇದ್ದಾರೆ, ಎಲ್ಲವನ್ನೂ ಅವರೇ ನೋಡಿಕೊಳ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ಮಾತನಾಡಿ, ಚಾಮರಾಜ, ಚಾಮುಂಡೇಶ್ವರಿ ಟಿಕೆಟ್ ಮಂಗಳವಾರ ಇತ್ಯರ್ಥವಾಗಲಿದೆ. ಮಂಗಳವಾರದ ಸಭೆ ಬಳಿಕ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ನಾನು ಕೋಲಾರಕ್ಕೆ ಹೋಗುವುದು, ಬಿಡುವುದು ಹೈಕಮಾಂಡ್ ತೀರ್ಮಾನವಾಗಿದೆ ಎಂದು ತಮ್ಮ ಎರಡನೇ ಕ್ಷೇತ್ರದ ಸ್ಪರ್ಧೆ ಬಗ್ಗೆ ಗೋಡೆ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದರು.
ಮೀಸಲಾತಿ ವಿಚಾರ ಕೋರ್ಟ್‌ನಲ್ಲಿ ನಿಲ್ಲಲ್ಲ! : ಮೀಸಲಾತಿ ಪರಿಷ್ಕರಣೆಯಿಂದ ಬಿಜೆಪಿಗೆ ಅನುಕೂಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಮೀಸಲಾತಿ ಯಾವುದೇ ಪೂರ್ವತಯಾರಿ ಇಲ್ಲದೆ ಚುನಾವಣೆಗಾಗಿ ತಂದಿರುವ ವಿಷಯ. ಶೇ.50ಕ್ಕಿಂತ ಹೆಚ್ಚಿರಬಾರದು ಎಂಬ ನಿಮಯ ಮೀರಿ ಶೇ.6ರಷ್ಟು ಮೀಸಲಾತಿ ಹೆಚ್ಚಳವಿದೆ. ಇದಕ್ಕೆ ಸಂವಿಧಾನದ ತಿದ್ದುಪಡಿ ಆಗಬೇಕಿತ್ತು. ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಯಬೇಕಿತ್ತು. ಇದ್ಯಾವುದನ್ನೂ ಇವರು ಮಾಡಿಯೇ ಇಲ್ಲ. ಈ ಕಾರಣದಿಂದ ಇದು ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ ಎಂದರು.