ಬೆಂಗಳೂರು : ಜನರಿಗೆ ಆಸೆ, ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು. ಕೇಂದ್ರ ಚುನಾವಣಾ ಆಯೋಗ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಜನರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಗ್ಯಾರಂಟಿ ಕೂಪನ್ ಗಳ ಮೇಲೆ ಸಹಿ ಮಾಡಿ ಮನೆಮನೆಗೂ ಹಂಚಿಕೆ ಮಾಡಿದ್ದಾರೆ. ಈ ಕೂಪನ್ ಗಳ ಬಗ್ಗೆ ಆಯೋಗ ತನಿಖೆ ನಡೆಸಿ, ರಾಜ್ಯದ ಆ ಪಕ್ಷದ 135 ಶಾಸಕರ ಸದಸ್ಯತ್ವ ರದ್ದುಗೊಳಿಸುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಚುನಾವಣಾ ಆಯೋಗವನ್ನು ಒತ್ತಾಯ ಮಾಡಿದರು.
ಕಳೆದ ವಿಧಾನಸಭೆ ಚುನಾವಣೆ ನಡೆದಿದ್ದೇ ಕುಕ್ಕರ್, ಮಿಕ್ಸಿ, ತವಾಗಳ ಮೇಲೆಯೇ. ಈ ಚುನಾವಣೆ ನಡೆಸಿದ್ದೇ ಕುಕ್ಕರ್, ಇಸ್ತ್ರಿಪೆಟ್ಟಿಗೆ, ತವಾ ಹಂಚಿಕೊಂಡು. ಅವುಗಳಿಂದಲೇ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗೆದ್ದಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಇದಕ್ಕೆಲ್ಲ ರಾಜ್ಯದ ಜನತೆಗೆ ಮರುಳಾಗಬೇಡಿ ಅಂದಿದ್ದೆ. ನಮ್ಮ ಚನ್ನಪಟ್ಟಣದಲ್ಲಿ ನಮ್ಮ ಜನ ಇಂಥ ಆಮಿಷಗಳಿಗೆ ಮರುಳು ಆಗಲಿಲ್ಲ. ಆದರೆ, ರಾಮನಗರದಲ್ಲಿ ಅದೆಲ್ಲಾ ನಡೆಯಿತು. ಅಲ್ಲಿ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಲಾಯಿತು. ಚುನಾವಣಾ ಆಯೋಗ ಸರಿಯಾಗಿ ತನಿಖೆ ಮಾಡಿದರೆ, ಸತ್ಯ ಹೊರಬರುತ್ತದೆ. ಈ ಸರ್ಕಾರವನ್ನು ವಜಾ ಮಾಡಬೇಕು ಎಂದರು.
ಈವರೆಗೂ ರಾಜ್ಯದಲ್ಲಿ ಇಂಥ ಅಕ್ರಮ ಸರ್ಕಾರ ಬಂದಿಲ್ಲ. ಪ್ರಜಾಪ್ರಭುತ್ವದ ದಾರಿಯಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಚುನಾವಣಾ ಆಯೋಗ ಸರಿಯಾದ ರೀತಿ ತೀರ್ಮಾನ ಮಾಡಿದರೆ ಈ ಸರ್ಕಾರವನ್ನು ವಜಾ ಮಾಡಬೇಕು ಎಂದ ಅವರು, ಕೇಂದ್ರ ಸರ್ಕಾರವೂ ಗಿಫ್ಟ್ ಕೂಪನ್ ಹಂಚಿಕೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ : ಯಾವುದೇ ಕಾರಣಕ್ಕೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಚನ್ನಪಟ್ಟಣದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ನಾನು ಲೋಕಸಭೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಅಂತಹ ಆಲೋಚನೆಯೂ ಇಲ್ಲ ಎಂದು ಅವರು ತಿಳಿಸಿದರು.
ಬಿಜೆಪಿ ಜತೆ ಮೈತ್ರಿ ಕುರಿತ ಚರ್ಚೆಗೆ ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ. ಆ ಪಕ್ಷದ ಹೈಕಮಾಂಡ್ ನ ಕೆಲ ಉನ್ನತ ನಾಯಕರನ್ನು ಭೇಟಿ ಮಾಡುತ್ತೇನೆ. ಭೇಟಿ ಬಳಿಕ ಏನು ಚರ್ಚೆ ಆಗುತ್ತದೋ ನೋಡೊಣ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.