ನವದೆಹಲಿ: ಲೋಕಸಭೆ ಚುನಾವಣೆಗೆ ಹತ್ತು ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಭಾನುವಾರ ಕಾಂಗ್ರಸ್ ಬಿಡುಗಡೆ ಮಾಡಿದೆ.
ಕಾಂಗ್ರಸ್ ಪಕ್ಷವು ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್ ಮತ್ತು ಜಲಂಧರ್‌ನಿಂದ ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಕಣಕ್ಕಿಳಿಸಿದೆ.
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕನ್ಹಯ್ಯಾ ಕುಮಾರ್ (37) ಅವರು ಈಶಾನ್ಯ ದೆಹಲಿಯಿಂದ ಬಿಜೆಪಿ ಸಂಸದರಾಗಿರುವ ಮನೋಜ್ ತಿವಾರಿ ಅವರನ್ನು ಎದುರಿಸಲಿದ್ದಾರೆ. ಮೇ 25 ರಂದು ಮತದಾನ ನಡೆಯಲಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಕನ್ಹಯ್ಯಾ ಕುಮಾರ್ ಅವರು ಬಿಹಾರದ ಬೇಗುಸರಾಯ್‌ನಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಅವರು ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು. ನಂತರ ಅವರು 2021ರಲ್ಲಿ ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಜೈ ಪ್ರಕಾಶ್ ಅಗರ್ವಾಲ್ ನನ್ನು ಚಾಂದಿನಿ ಚೌಕದಿಂದ, ಉದಿತ ರಾಜ್ ವಾಯುವ್ಯ ದೆಹಲಿಯಿಂದ, ಗುರ್ಜಿತ್ ಸಿಂಗ್ ಔಜ್ಲರನ್ನು ಪಂಜಾಬ್‌ನ ಅಮೃತಸರದಿಂದ, ಕಾಂಗ್ರೆಸ್ ಕಣಕ್ಕಿಳಿಸಿದೆ.
ಫತೇಘರ್ ಸಾಹಿಬ್‌ನಿಂದ ಅಮರ್ ಸಿಂಗ್, ಬಟಿಂಡಾದಿಂದ ಜೀತ್ ಮೊಹಿಂದರ್ ಸಿಂಗ್ ಸಿಧು, ಸಂಗ್ರೂರ್‌ನಿಂದ ಸುಖಪಾಲ್ ಸಿಂಗ್ ಖೈರಾ ಮತ್ತು ಪಟಿಯಾಲದಿಂದ ಧರಂವೀರ್ ಗಾಂಧಿ ಅವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಉತ್ತರ ಪ್ರದೇಶದ ಅಲಹಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಉಜ್ವಲ್ ರೇವತಿ ರಮಣ್ ಸಿಂಗ್ ಅವರನ್ನು ಪಕ್ಷ ಘೋಷಿಸಿದೆ.




