ಬೆಂಗಳೂರು: ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳಿಂದ ರಾಜ್ಯಪಾಲರಿಗೆ ದೂರು ವಿಚಾರವಾಗಿ ತನಿಖೆ ನಡೆಸೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಪಾಪ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ನಾವು ಮಂಡ್ಯದಲ್ಲಿ ಏಳಕ್ಕೆ ಆರು ಗೆದ್ದುಬಿಟ್ಟಿದ್ದೀವಲ್ಲ ಅದಕ್ಕಾಗಿ ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಹೊಟ್ಟೆಕಿಚ್ಚು, ಮತ್ಸರಕ್ಕೆ ಮದ್ದಿಲ್ಲ.
ಬೇರೆ ಬೇರೆ ಆರೋಪಗಳನ್ನು ಮಾಡ್ತಿದ್ದಾರೆ. ಅದರ ಬಗ್ಗೆಯೂ ತನಿಖೆ ಮಾಡಿಸೋಣ ಎಂದು ತಿರುಗೇಟು ನೀಡಿದರು. ನನ್ನ ವಿರುದ್ಧವೂ ಮಾಜಿ ಸಚಿವ ಅಶ್ವತ್ಥ ನಾರಾಯಣ ತನಿಖೆ ಮಾಡಿಸಿ ಅಂತ ಹೇಳಿದ್ರು. ಮುನಿರತ್ನ ವಿರುದ್ಧ ಆರೋಪಗಳನ್ನು ತನಿಖೆ ಮಾಡಿಸಿ ಅಂದಿದ್ದರು. ಎಲ್ಲವನ್ನೂ ತನಿಖೆ ಮಾಡಿಸೋಣ ಎಂದರು.
ನಾವು ಕೆಂಪಣ್ಣ ಆರೋಪದ ಮೇಲೆ ತಾನೇ ತನಿಖೆ ಮಾಡ್ತಾ ಇರೋದು. ಬಿಬಿಎಂಪಿಯಲ್ಲಿ ಕೆಲಸ ಯಾರು ಕೊಟ್ಟರು ಗೊತ್ತಿಲ್ಲ ಟೆಂಡರ್ ಆಗಿಲ್ಲ, ಆದರೂ ಕಾಮಗಾರಿ ಮಾಡಿದ್ದಾರೆ. 25 ದಿನಕ್ಕೆ, 15 ದಿನಕ್ಕೆ ಬಿಲ್ ಆಗಿಬಿಡತ್ತಾ? ಹದಿನೈದೇ ದಿನಕ್ಕೆ ಇಲ್ಲಿ ಕೆಲಸ ಆಗಿಬಿಡುತ್ತಾ? ಅದಕ್ಕಾಗಿಯೇ ಪರಿಶೀಲನೆಗೆ ಅಧಿಕಾರಿಗಳನ್ನು ಹಾಕಿದ್ದೇನೆ ಎಂದರು.
ಗುತ್ತಿಗೆದಾರರು ಬಂದಿದ್ರು, ನೈಜತೆಯ ಕೆಲಸಗಳ ಬಗ್ಗೆ ನಮಗೆ ತಕರಾರಿಲ್ಲ.
ನಮ್ಮ ಜಲಸಂಪನ್ಮೂಲ ಇಲಾಖೆಯಲ್ಲಿ ದುಡ್ಡು ಇರೋದು 600 ಕೋಟಿ. ಬಿಲ್ ಬಂದಿರೋದು 25 ಸಾವಿರ ಕೋಟಿಗೆ. ನಾವು ಯಾರಿಗೆ ಅಂತ ಹಣ ಮಂಜೂರು ಮಾಡಲಿ? ಎಂದು ಅಸಹಾಯಕತೆ ತೋಡಿಕೊಂಡರು.
ಗುತ್ತಿಗೆದಾರರು ನೊಂದಿದ್ದಾರೆ, ಪಾಪ
ನಮಗೂ ಜವಾಬ್ದಾರಿ ಇದೆ. ಇದೇ ಅಶ್ವತ್ಥ ನಾರಾಯಣ ಸದನದಲ್ಲಿ ತನಿಖೆ ಮಾಡಿಸಿ ಅಂತ ಆಗ್ರಹಿಸಿರಲಿಲ್ವಾ. ಅವರ ನುಡಿಮುತ್ತುಗಳನ್ನು ನಾವು ಕೇಳಲೇಬೇಕಲ್ಲ ಎಂದು ತಿರುಗೇಟು ನೀಡಿದರು.