Mysore
20
overcast clouds
Light
Dark

ಸಿಎಂ ಹುದ್ದೆ : ಡಿಕೆಶಿ ಪರ ಒಕ್ಕಲಿಗರು, ಸಿದ್ದು ಪರ ಕುರುಬರ ಲಾಬಿ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ನಡುವೆ ಪೈಪೋಟಿ ತೀವ್ರಗೊಂಡಿರುವ ನಡುವೆಯೇ ಇಬ್ಬರೂ ನಾಯಕರ ಪರ ಆಯಾ ಸಮುದಾಯಗಳ ನಡುವೆ ಜಾತಿ ರಾಜಕಾರಣ ಶುರುವಾಗಿದೆ. ಸಿದ್ದರಾಮಯ್ಯ ಪರ ಕುರುಬರು, ಡಿ.ಕೆ.ಶಿವಕುಮಾರ್‌ ಅವರ ಪರ ಒಕ್ಕಲಿಗರು ಸಭೆ ನಡೆಸಿ ಬ್ಯಾಟ್‌ ಬೀಸಿದ್ದಾರೆ.

ಭಾನುವಾರ ವಿಜಯನಗರದ ಶಾಖಾ ಮಠದಲ್ಲಿ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ಸೇರಿದಂತೆ ವಿವಿಧ ಒಕ್ಕಲಿಗ ಮಠಾಧೀಶರು, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಿವೃತ್ತ ಅಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್‌ ಅವರ ಪಾತ್ರ ದೊಡ್ಡದಿದ್ದು, ಹಾಗಾಗಿ ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸಲು ಹಾಗೂ ಹೈಕಮಾಂಡ್‌ ಮೇಲೆ ಒತ್ತಡ ತರಲು ತೀರ್ಮಾನಿಸಿದ್ದಾರೆ. ಸಭೆಯಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಮತ್ತಿತರರು ಕೂಡ ಹಾಜರಿದ್ದರು.

ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವುದು ಸಂಪ್ರದಾಯ: ‘ಡಿ.ಕೆ. ಶಿವಕುಮಾರ್‌ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿ ಆಗುತ್ತಾರೆ. ಆದ್ದರಿಂದ ಡಿ.ಕೆ.ಶಿವಕುಮಾರ್‌ ಅವರನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದು ಭಾವಿಸಿದ್ದೇನೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಅವರು, ‘ಎಲ್ಲ ಮಾನದಂಡಗಳಿಂದಲೂ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗಿರುವುದರಿಂದ ಅವರು ಕೂಡ ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಎನ್ನುವುದು ನಮ್ಮ ಆಶಯ ಕೂಡ ಆಗಿದೆ’ ಎಂದು ಹೇಳಿದರು. ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ನನ್ನ ಕೈಗೂ ಪೆನ್ನು(ಅಧಿಕಾರ) ಕೊಟ್ಟು ನೋಡಿ’ ಎಂದು ಸಮುದಾಯದ ಹಲವು ಸಭೆಗಳಲ್ಲಿ ಶಿವಕುಮಾರ್‌ ಮನವಿ ಮಾಡಿಕೊಂಡಿದ್ದಾರೆ. ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದಂತೆ ಶಿವಕುಮಾರ್‌ ಅವರಿಗೂ ಸಮುದಾಯ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಸಿದ್ದು ಪರ ಕುರುಬ ಸಂಘದ ಸಭೆ : ಮತ್ತೊಂದೆಡೆ ಬೆಂಗಳೂರಿನ ಕುರುಬರ ಸಂಘದಲ್ಲಿ ಭಾನುವಾರ ಕುರುಬ ಜನಾಂಗದ ಹಲವು ಮುಖಂಡರು ಸಭೆ ನಡೆಸಿದ್ದು ಸಿದ್ದರಾಮಯ್ಯ ಅವರನ್ನೇ ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕೆಂದು ಕಾಂಗ್ರೆಸ್‌ ವರಿಷ್ಠರು ಮತ್ತು ಹೈಕಮಾಂಡ್‌ ನಾಯಕರ ಮೇಲೆ ಒತ್ತಡ ತರಲು ನಿರ್ಧರಿಸಿದ್ದಾರೆ. ಸಭೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಕುರುಬ ಸಮಾಜದ ಪ್ರಭಾರಿ ಅಧ್ಯಕ್ಷ ಸುಬ್ರಹ್ಮಣ್ಯ, ಬಿಬಿಎಂಪಿ ಮಾಜಿ ವಿಪಕ್ಷ ನಾಯಕ ಎಂ.ಶಿವರಾಜು, ಮಾಜಿ ಮೇಯರ್‌ ವೆಂಕಟೇಶ್‌ ಮೂರ್ತಿ, ನಾಗರಾಜ್‌ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟ್‌ ಬೀಸಿದ್ದಾರೆ. 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ