Mysore
25
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಕಾವೇರಿ ನೀರು ಬಿಡುಗಡೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಿಎಂ ಸ್ಟಾಲಿನ್

ಚೆನ್ನೈ : ಕರ್ನಾಟಕದ ಕಾವೇರಿ ಜಲಾನಯನ ತೀರಾ ಪ್ರದೇಶದಲ್ಲಿ ವಾಡಿಕೆಗಿಂತ ಕಳೆದ ಜೂನ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿರುವ ಹಿನ್ನೆಲೆ ತಮಿಳುನಾಡು ಪಾಲಿನ ನೀರನ್ನು ತಕ್ಷಣವೇ ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್, ಪ್ರಸ್ತುತ ನಮ್ಮ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕುಡಿಯುವ ನೀರು ಮತ್ತಿತರ ಚಟುವಟಿಕೆಗಳಿಗೆ ನೀರಿನ ಅಗತ್ಯವಿದೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೂಡಲೇ ನಿಗದಿತ ವೇಳಾಪಟ್ಟಿಯಂತೆ ಜೂನ್ ಮತ್ತು ಜುಲೈ ತಿಂಗಳ ಕೊರತೆಯನ್ನು ನೀಗಿಸಲು ಕಾವೇರಿ ನೀರು ಹರಿಸಬೇಕೆಂದು ಮನವಿ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಪ್ರಸ್ತುತ ಕುರುವಾಯಿ ಭತ್ತಕ್ಕೆ ನೀರಿನ ಅಗತ್ಯವಿದ್ದು, ಲಕ್ಷಾಂತರ ಕುಟುಂಬಗಳು ಇದನ್ನೇ ಅವಲಂಬಿಸಿವೆ. ಈ ಬಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಕಾವೇರಿ ಜಲಾನಯನದ ಕೆಲವು ಅಣೆಕಟ್ಟುಗಳು ಭರ್ತಿಯಾಗಿದ್ದರೆ ಇನ್ನು ಕೆಲವು ಭರ್ತಿಯ ಹಂತಕ್ಕೆ ಬಂದಿವೆ.

ಹೀಗಾಗಿ ತಕ್ಷಣವೇ ಕಾವೇರಿ ಜಲಾನಯನದಿಂದ ಅಗತ್ಯವಿರುವ ನೀರನ್ನು ಮೆಟ್ಟೂರು ಅಣೆಕಟ್ಟು ಮೂಲಕ ಹರಿಸಲು ಕರ್ನಾಟಕ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಎಂದು ಸ್ಟಾಲಿನ್ ಕೋರಿದ್ದಾರೆ. ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿರುವ ಸ್ಟಾಲಿನ್, ಈ ಹಿಂದೆ ಕಾವೇರಿ ನದಿನೀರು ಪ್ರಾಕಾರದ ಆದೇಶದ ಅನ್ವಯ ನಮಗೆ ಎಷ್ಟು ನೀರು ಹರಿಸಬೇಕೋ ಅಷ್ಟನ್ನು ಬಿಡಬೇಕೆಂದು ಹೇಳುವುದಿಲ್ಲ. ಆದರೆ ಸದ್ಯಕ್ಕೆ ಅಗತ್ಯವಿರುವಷ್ಟಾದರೂ ಬಿಡಬೇಕೆಂದು ಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.

ಇನ್ನೂ 2023 – 24ರಲ್ಲಿ ಕರ್ನಾಟಕ ರಾಜ್ಯದಿಂದ ಕೇವಲ 11.6 ಟಿಎಂಸಿ ನೀರು ಬಿಡುಗಡೆ ಆಗಿದೆ. ಆದರೆ, ಬಿಳಿಗುಂಡ್ಲು ಜಲ ಮಾಪಕ ಕೇಂದ್ರದಿಂದ ತಮಿಳುನಾಡಿಗೆ 40.4 ಟಿಎಂಸಿ ನೀರು ಹರಿದು ಬರಬೇಕು. ಅಂತಾರಾಜ್ಯ ಗಡಿಯಿಂದ ಜೂನ್ 1ರಿಂದ ಜುಲೈ 31ರವರೆಗೆ ಬರಬೇಕಾದ ನೀರಿನ ಪ್ರಮಾಣದಲ್ಲಿ ಕೊರತೆ ಆಗಿದೆ ಎಂದು ಸ್ಟಾಲಿನ್ ವಿವರಿಸಿದ್ದಾರೆ.

ಅಲ್ಲದೇ ತಮಿಳುನಾಡಿಗೆ ಕಳೆದ 2 ತಿಂಗಳಿನಿಂದ ಬಾಕಿ ಇರುವ 28.8 ಟಿಎಂಸಿ ನೀರು ಬಿಡುಗಡೆ ಆಗಿಲ್ಲ. ಕರ್ನಾಟಕ ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ನಾಲ್ಕು ಪ್ರಮುಖ ಅಣೆಕಟ್ಟುಗಳಿಗೆ 91 ಟಿಎಂಸಿ ನೀರಿನ ಕೊರತೆ ಎದುರಾಗಿದೆ.

ತಮಿಳುನಾಡಿನಲ್ಲಿ ಕಾವೇರಿ ನದಿ ಪಾತ್ರದ ಕೃಷಿಕರು ನೀರಿನ ಅಭಾವ ಎದುರಿಸುತ್ತಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ಬರದ ಛಾಯೆ ಮೂಡಿದೆ. ಕಾವೇರಿ ನದಿ ಪಾತ್ರದಲ್ಲಿ ಕುರುವೈ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಭತ್ತ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತಮಿಳುನಾಡಿನಲ್ಲಿ ಇರುವ ಮೆಟ್ಟೂರು ಅಣೆಕಟ್ಟು ಕಾವೇರಿ ನದಿ ಪಾತ್ರದ ಜನತೆಯ ಜೀವನಾಡಿ ಆಗಿದೆ. ಈ ಅಣೆಕಟ್ಟಿನ ಒಟ್ಟು ಸಂಗ್ರಹಣಾ ಸಾಮಥ್ರ್ಯ 93.6 ಟಿಎಂಸಿ. ಆದರೆ, ಈ ಡ್ಯಾಂನಲ್ಲಿ ಒಟ್ಟು 26.6 ಟಿಎಂಸಿ ನೀರು ಮಾತ್ರ ಇದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಕಾವೇರಿ ನದಿ ನೀರಿನ ಸಮಸ್ಯೆ ಕುರಿತು ತಮಿಳುನಾಡು ಸರ್ಕಾರವು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಗಮನಕ್ಕೂ ತಂದಿದ್ದೇವೆ. ಜುಲೈ 5 ಹಾಗೂ 19 ರಂದು ಅವರ ಗಮನಕ್ಕೆ ತರಲಾಗಿದೆ. ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿ ಹಾಗೂ ಸುಪ್ರೀಂಕೋರ್ಟ್, ಕಾವೇರಿ ನದಿ ನೀರು ಪ್ರಾಕಾರದ ಆದೇಶಕ್ಕೆ ಬದ್ಧರಾಗಿರುವಂತೆ ಸೂಚಿಸಿ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡಿನ ನದಿ ಪಾತ್ರದ ಜಿಲ್ಲೆಗಳ ಕುಡಿಯುವ ನೀರು ಹಾಗೂ ಇನ್ನಿತರ ಅಗತ್ಯತೆಗಳನ್ನು ಪೂರೈಸಿದ ಬಳಿಕ ಮೆಟ್ಟೂರು ಅಣೆಕಟ್ಟಿನಲ್ಲಿ ಕುರುವೈ ಬೆಳೆಗೆ ಕೇವಲ 15 ದಿನಗಳ ಕಾಲ ನೀರು ಪೂರೈಸುವಷ್ಟು ಇದೆ. ಆದರೆ, ಮುಂದಿನ ದಿನಗಳಲ್ಲಿ ನಮಗೆ ಇನ್ನೂ 45 ದಿನಗಳ ಅಗತ್ಯತೆಯಷ್ಟು ನೀರು ಬೇಕಿದೆ. ಬೆಳೆಗಳಿಗೆ ಸೂಕ್ತ ಕಾಲಕ್ಕೆ ನೀರು ಸಿಗದೆ ಫಸಲು ಕೈಗೆ ಸಿಗದಂತೆ ಆಗುತ್ತೆ ಎಂದು ಅವರು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!