Mysore
20
overcast clouds
Light
Dark

ಮೌಢ್ಯಕ್ಕೆ ಸೆಡ್ಡು ಹೊಡೆದ ಸಿಎಂ: ದೇವಸ್ಥಾನಕ್ಕೆ ಭೇಟಿ ನೀಡದೆಯೇ ಬಜೆಟ್ ಮಂಡನೆ

ಬೆಂಗಳೂರು: ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡುವ ಸಂಪ್ರದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಲಾಂಜಲಿ ಇಟ್ಟಿದ್ದು, ದೇಗುಲಕ್ಕೆ ಭೇಟಿ ನೀಡದೆಯೇ ನೇರವಾಗಿ ವಿಧಾನಸಭೆಗೆ ತೆರಳಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸುವ ಮೂಲಕ, ಬಜೆಟ್ ಮಂಡನೆಗೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಮುರಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬರುವ ಮುನ್ನ ಎರಡು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಬೊಮ್ಮಾಯಿ ಅವರು ಆರ್‌.ಟಿ ನಗರದ ಶ್ರೀಕಂಠೇಶ್ವರ ದೇವಸ್ಥಾನ ಮತ್ತು ಆಂಜನೇಯನ ದೇಗುಲಕ್ಕೆ ಭೇಟಿ ನೀಡಿದ್ದರು.

ಅಂಧಶ್ರದ್ಧೆಗಳಿಗೆ ಉತ್ತೇಜನ ನೀಡದ ಸಿಎಂ ಸಿದ್ದರಾಮಯ್ಯನವರು ವಾಸ್ತು ಕಾರಣಕ್ಕೆ ಮುಚ್ಚಲಾಗಿದ್ದ ವಿಧಾನಸೌಧದ ಕಚೇರಿಯ ದಕ್ಷಿಣ ದ್ವಾರವನ್ನು ತೆಗೆಸಿದ್ದರು. ಅವರು ಸಿಎಂ ಆಗಿದ್ದ ಅವಧಿಯಲ್ಲಿ ಹಲವು ಬಾರಿ ಚಾಮರಾಜನಗರ ನಗರಕ್ಕೆ ಭೇಟಿ ನೀಡಿದ್ದರು. ಚಾಮರಾಜನಗರಕ್ಕೆ ಭೇಟಿ ನೀಡಿದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇತ್ತು.

ಬಜೆಟ್ ಮಂಡನೆ ವೇಳೆ ಹಾಜರಿರುವಂತೆ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಒಗ್ಗಟ್ಟು ಪ್ರದರ್ಶಿಸಿ ಪ್ರತಿಪಕ್ಷಗಳ ದಾಳಿಗೆ ತಕ್ಕ ಉತ್ತರ ನೀಡುವಂತೆಯೂ ಕೇಳಿಕೊಂಡರು. ಖಾತರಿ ಯೋಜನೆಗಳನ್ನು ಅನುಷ್ಠಾನಗೊಳಿಸಿಯೇ ತೀರುವ ಒತ್ತಡದಲ್ಲಿರುವುದರಿಂದ ತಮ್ಮತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಒತ್ತಾಯ ಮಾಡಬೇಡಿ ಎಂದು ಅವರು ಶಾಸಕರನ್ನು ಕೋರಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ