ಬೆಂಗಳೂರು: ಪತ್ರಕರ್ತ ವಿಶ್ವೇಶ್ವರ್ ಭಟ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಗೈರಾಗಿದ್ದು, ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಬರೆಹ ಬರೆಯುವ ಪತ್ರಕರ್ತ ವಿಶ್ವೇಶ್ವರ್ ಭಟ್ ಅವರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಕೂಡದೆಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಹಲವು ಮಹಿಳಾ ಪರ ಹೋರಾಟಗಾರ್ತಿಯರು, ಚಿಂತಕರು ಕೂಡಾ ಈ ಆಗ್ರಹಕ್ಕೆ ದನಿಗೂಡಿಸಿದ್ದರು.
ಇದೀಗ ಇಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸದಿರುವುದು ಈ ಅಭಿಯಾನದಲ್ಲಿ ತೊಡಗಿಸಿಕೊಂಡವರ ಸಂತಸಕ್ಕೆ ಕಾರಣವಾಗಿದೆ.
ಹಲವರು ಸಿದ್ದರಾಮಯ್ಯನವರಿಗೆ ಧನ್ಯವಾದಗಳನ್ನು ತಿಳಿಸಿದ್ದು, ತಮ್ಮ ಮನವಿಗೆ ಕಿವಿಯಾಗಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಲೇಖಕ ಜಗದೀಶ್ ಕೊಪ್ಪಟವರು ಪ್ರತಿಕ್ರಿಯಿಸಿ, “ಸಿದ್ಧರಾಮಯ್ಯನವರೇ ನಿಮಗೆ ಧನ್ಯವಾದಗಳು. ನಮ್ಮಗಳ ನಿರೀಕ್ಷೆ ಮತ್ತು ನಂಬಿಕೆಗಳನ್ನು ನೀವು ದಾಟಲಿಲ್ಲ .ಮತ್ತು ಹುಸಿ ಮಾಡಲಿಲ್ಲ. ನೀವು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗದಿದ್ದುಕ್ಕೆ ಕೃತಜತೆಗಳು” ಎಂದು ತಿಳಿಸಿದ್ದಾರೆ.
“ತ್ಯಾಂಕ್ಯು ಸಿದ್ದರಾಮಯ್ಯ ಅವರೇ… ನಿಮ್ಮ ಮೇಲಿನ ಅಭಿಮಾನ ದುಪ್ಪಟ್ಟಾಯ್ತು..” ಎಂದು ಹರ್ಷಕುಮಾರ್ ಕುಗ್ವೆ ಬರೆದಿದ್ದಾರೆ.