Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಲೋಕಸಭಾ ಚುನಾವಣೇ ಬಳಿಕ ರಾಜಕೀಯದಲ್ಲಿ ಬದಲಾವಣೆ : ಬಿ.ವೈ.ವಿಜಯೇಂದ್ರ ಭವಿಷ್ಯ

ಮೈಸೂರು: ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆ ಪ್ರಕರಣಲ್ಲಿ ದುರಹಂಕಾರದ ಹೇಳಿಕೆಗಳನ್ನು ನೀಡುತ್ತಿರುವುದನ್ನು ಯಾರೂ ಕೂಡ ಸಹಿಸಲ್ಲ. ಗಂಭೀರವಾದ ಘಟನೆ ನಡೆದಿದ್ದರೂ ವೈಯಕ್ತಿಕ ವಿಚಾರಕ್ಕೆ ಕೊಲೆಯಾಗಿದೆ ಎಂದು ಸಿಎಂ, ಸಚಿವರು ಹೇಳುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.

ಬಿಜೆಪಿ ಚುನಾವಣೆಯನ್ನು ಬದಿಗಿಟ್ಟು ಹೋರಾಟ ಮಾಡುತ್ತಿದ್ದೇವೆ. ನೇಹಾ ಪೋಷಕರೇ ಈ ಘಟನೆ ಹಿಂದೆ ಲವ್ ಜಿಹಾದ್ ಇದೇ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಅಂತ ಜನರು ಮಾತನಾಡುತ್ತಿದ್ದಾರೆ. ಈ ಆರೋಪಗಳಿಗೆ ರಾಜ್ಯ ಸರ್ಕಾರವೇ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ನೇಹಾ ಹಾಗೂ ಆರೋಪಿ ಫೋಟೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ನೀಚ ಕೆಲಸ ಮಾಡುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಫೋಟೋ ವೈರಲ್ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕಿಡಿಕಾರಿದರು.

ಗ್ಯಾರಂಟಿ ನಿಲ್ಲಿಸಿದರೆ ಜನರೇ ಬಡಿಗೆ ತೆಗೆದುಕೊಂಡು ಸರ್ಕಾರವನ್ನು ಬಡಿಯುತ್ತಾರೆ ಎನ್ನುವ ಬಗ್ಗೆ ಎಚ್ಚರವಿರಲಿ. ಗ್ಯಾರಂಟಿ ಹೆಸರು ಹೇಳಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
ಈ ಸರ್ಕಾರದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಹೇಳಿ? ಒಂದೇ ಒಂದು ನಾಯಾಪೈಸೆ ಬಿಡುಗಡೆಯಾಗಿದ್ಯಾ? ಎಂದು ಪ್ರಶ್ನಿಸಿದರು.

ಮೋದಿ ರಾಜ್ಯದ ಭೇಟಿ ವೇಳೆ ಚೊಂಬು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಚುನಾವಣೆ ಮುಗಿದ ಮೇಲೆ ನಲಪಾಡ್ ಹಾಗೂ ಕಾಂಗ್ರೆಸ್ ನಾಯಕರಿಗೆ ಅದೇ ಪರಿಸ್ಥಿತಿ ಬರಲಿದೆ. ಫಲಿತಾಂಶ ಬಂದ ನಂತರ ಅವರು ಚೊಂಬು ಹಿಡಿದುಕೊಂಡು ಹೋಗುವ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಜಾಹೀರಾತು, ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮಿತ್ತಿಲ್ಲ. ಅವರು ಏನಾದರೂ ಜಾಹೀರಾತು ಕೊಟ್ಟುಕೊಳ್ಳಲಿ. ಈ ಬಾರಿ ಜನ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡುತ್ತಾರೆ. ರೈತರ ಸಾಲಮನ್ನಾ ಹಾಗೂ ಕಾಂಗ್ರೆಸ್ ಹೊಸ ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಯಾವುದನ್ನೂ ಪೂರೈಸಲ್ಲ. ಅವರು ಅಧಿಕಾರಕ್ಕೆ ಬಂದರೆ ತಾನೇ ಮಾಡುವುದು? ದೇಶದಲ್ಲಿ ಕಾಂಗ್ರೆಸ್ ೫೦ ಸೀಟ್ ಸಹ ದಾಟಲ್ಲ. ಆದ್ದರಿಂದ ಪ್ರಣಾಳಿಕೆ ಗ್ಯಾರಂಟಿ ಯಾವುದು ಜಾರಿಯಾಗಲ್ಲ ಎಂದರು.

Tags: