Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

‘ಚಂದ್ರಯಾನ- 3’ ಮತ್ತೊಂದು ಹೆಜ್ಜೆ: ಚಂದ್ರನ ಕಕ್ಷೆ ಸೇರ್ಪಡೆ ಯಶಸ್ವಿ

ನವದೆಹಲಿ : ದೇಶದ ಮಹತ್ವಾಕಾಂಕ್ಷೆಯ ‘ಚಂದ್ರಯಾನ- 3’ ಮತ್ತೊಂದು ಹೆಜ್ಜೆ ಕ್ರಮಿಸಿದ್ದು, ಚಂದ್ರನ ಅಂಗಳದಲ್ಲಿ ಕಾಲಿರಿಸುವ ಪ್ರಯತ್ನದಲ್ಲಿ ಇನ್ನೊಂದು ಹಂತವನ್ನು ಯಶಸ್ವಿಯಾಗಿ ಪೂರೈಸಿದೆ.

ಚಂದ್ರಯಾನ- 3 ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಟ್ವೀಟ್ ಮೂಲಕ ತಿಳಿಸಿದೆ. ಭೂಮಿಯಿಂದ ಉಡಾವಣೆಯಾದ ಚಂದ್ರಯಾನ ನೌಕೆಯು, ಈಗ ತನ್ನ ಉದ್ದೇಶಿದ ಗುರಿಯಾದ ಚಂದ್ರನ ಕಕ್ಷೆಯನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪ್ರವೇಶಿಸುವ ಮೂಲಕ ಮತ್ತೊಂದು ಹಂತವನ್ನು ಸಫಲವಾಗಿ ಪೂರ್ಣಗೊಳಿಸಿದಂತಾಗಿದೆ. ಇದು ಇಸ್ರೋದ ಯೋಜನೆಯ ಮತ್ತೊಂದು ಯಶಸ್ಸಾಗಿದೆ.

ಬೆಂಗಳೂರಿನ ಐಎಸ್‌ಟಿಆರ್‌ಎಸಿಯ ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಿಂದ (ಎಂಓಎಕ್ಸ್) ಚಂದ್ರನಿಗೆ ಅತಿ ಸಮೀಪದ ಕಕ್ಷೆಯ ಭಾಗವಾದ ಪೆರಿಲೂನ್‌ನಿಂದ ರೆಟ್ರೋ ಬರ್ನಿಂಗ್ (ರಾಕೆಟ್‌ಗಳನ್ನು ಉಡಾವಣೆ ಮಾಡಿದ ದಿಕ್ಕಿನ ವಿರುದ್ಧ ಭಾಗದಿಂದ ರಾಕೆಟ್‌ ಉರಿಸುವುದು) ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಇಸ್ರೋ ಹೇಳಿದೆ.
ಮುಂದಿನ ಕಾರ್ಯಾಚರಣೆಯಾದ ಕಕ್ಷೆಯ ಸಂಕೋಚನ ಪ್ರಕ್ರಿಯೆಯನ್ನು ಆಗಸ್ಟ್ 6ರ ಭಾನುವಾರ ರಾತ್ರಿ 11 ಗಂಟೆ ಹಾಗೆ ನಿಗದಿಪಡಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಸಂಜೆ 7 ಗಂಟೆ ಸುಮಾರಿಗೆ ನೌಕೆಯು ಚಂದ್ರನ ಕಕ್ಷೆ ಪ್ರವೇಶಿಸಲಿದೆ ಎಂದು ಇದಕ್ಕೂ ಮುನ್ನ ಇಸ್ರೋ ಮಾಹಿತಿ ನೀಡಿತ್ತು. ಲೂನಾರ್ ಆರ್ಬಿಟ್ ಇನ್ಸರ್ಷನ್ (ಎಲ್‌ಒಐ) ಅಥವಾ ಚಂದ್ರನ ಕಕ್ಷೆ ಸೇರ್ಪಡೆ ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಂದ್ರಯಾನದ ಎಲ್ಲಾ ವ್ಯವಸ್ಥೆಗಳೂ ಆರೋಗ್ಯಪೂರ್ಣವಾಗಿವೆ ಎಂಬ ಸಂತಸದ ಸುದ್ದಿಯನ್ನು ಇಸ್ರೋ ಹಂಚಿಕೊಂಡಿದೆ.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ