ಕಳೆದ ಕೆಲ ದಿನಗಳ ಹಿಂದೆ ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಹಣ ವಂಚನೆ ಆರೋಪದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ವಿಧಾನಸಭೆಯ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 4 ಕೋಟಿ ರೂಪಾಯಿ ವಂಚನೆ ಮಾಡಿದ್ದ ಆರೋಪದಡಿಯಲ್ಲಿ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ಬಂಧಿಸಿದ್ದರು.
ಸದ್ಯ ಚೈತ್ರಾ ಕುಂದಾಪುರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ನಾಲ್ಕು ದಿನಗಳ ಹಿಂದೆಯಷ್ಟೇ ಚೈತ್ರಾ ಕುಂದಾಪುರ ಹಾಗೂ ಆಕೆಯ ಸಹಚರರ ವಿರುದ್ಧ ದೋಷಾರೋಪ ಪಟ್ಟಿಯನ್ನ ಸಲ್ಲಿಸಲಾಗಿತ್ತು. ಈ ವಿದ್ಯಾಮಾನಗಳು ನಡೆದ ಬೆನ್ನಲ್ಲೇ ಇದೀಗ ಚೈತ್ರಾ ಕುಂದಾಪುರಗೆ ಮತ್ತೊಂದು ಹಿನ್ನಡೆ ಉಂಟಾಗಿದೆ.
ತಾನು ಇದ್ದ ಜೈಲಿನ ಬ್ಯಾರಕ್‌ನಲ್ಲಿದ್ದ ಇತರೆ ಖೈದಿಗಳ ಜತೆ ಚೈತ್ರಾ ಕುಂದಾಪುರ ಜಗಳ ಮಾಡಿಕೊಂಡಿದ್ದು ಹಲ್ಲೆಗೊಳಗಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ರಾಷ್ಟ್ರಗೀತೆ ವಿಚಾರವಾಗಿ ಚೈತ್ರಾ ಕುಂದಾಪುರ ಆಫ್ರಿಕಾ ಮೂಲದ ಮೂವರು ಮಹಿಳಾ ಖೈದಿಗಳ ಜತೆ ಮಾತಿನ ಚಕಮಕಿ ನಡೆಸಿದ್ದು ಈ ವೇಳೆ ಆ ಆಫ್ರಿಕಾ ಖೈದಿಗಳು ಚೈತ್ರಾ ಕುಂದಾಪುರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಚೈತ್ರಾ ಕುಂದಾಪುರ ಜೈಲಿನ ಪೊಲೀಸರಿಗೆ ದೂರು ನೀಡಿದ್ದು ವಿಚಾರಣೆ ನಡೆಸುವಂತೆ ಮನವಿಯನ್ನೂ ಸಹ ಮಾಡಿದ್ದಾರೆ ಎನ್ನಲಾಗಿದೆ.