Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಅನ್ನಭಾಗ್ಯ ಯೋಜನೆ ಜಾರಿ ಹಿನ್ನಲೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ: ಸಿಎಂ ಆಕ್ರೋಶ

ಬೆಂಗಳೂರು: ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅವರೇನು ಪುಕ್ಕಟ್ಟೆ ಕೊಡುತ್ತಿರಲಿಲ್ಲ. ಕೆಜಿಗೆ 34 ರೂ ನಮ್ಮಿಂದ ತಗೊತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿಧಾನಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅನ್ನ ಭಾಗ್ಯ ಯೋಜನೆಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ಕನ್ನಡ ಜನತೆ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ ಎಂದು ಮಾಧ್ಯಮಗಳ ಮೂಲಕ ನಾಡಿನ ಜನತೆಯನ್ನು ಪ್ರಶ್ನಿಸಿದರು

4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170ರೂ ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು-ಮಧ್ತಮ ವರ್ಗದವರು ಎರಡು ಹೊತ್ತು ತಿಂದರೆ ಬಿಜೆಪಿಗೆ ಏನು ಹೊಟ್ಟೆಯುರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ನಿಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಿರ್ವಹಿಸಿ ಎಂದು ಕರೆ ನೀಡಿದರು.

ನೆಮ್ಮದಿಯ ಬದುಕಿಗೆ ಆಹಾರ ಭದ್ರತೆ ಅನ್ನಭಾಗ್ಯ ಎನ್ನುವ ಘೋಷವಾಕ್ಯದಲ್ಲಿ ಚಾರಿತ್ರಿಕವಾದ ಕಾರ್ಯಕ್ರಮಕ್ಕೆ ಸರ್ಕಾರ ರಚನೆಯಾಗಿ 50ನೇ ದಿನಕ್ಕೇ ಚಾಲನೆ ನೀಡಲಾಯಿತು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನ್ನಭಾಗ್ಯದ ಲೋಗೋ ಬಿಡುಗಡೆ ಮಾಡಿದರು. ಯೋಜನೆಯ ಮಾಹಿತಿ ಪತ್ರವನ್ನು ಆರೋಗ್ಯ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಬಿಡುಗಡೆ ಮಾಡಿದರು.

ಬಸವ ಜಯಂತಿಯಂದು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರು, “ಬಸವಣ್ಣನವರ ದಾಸೋಹ ಸಂಸ್ಕೃತಿಯಂತೆ ಹಸಿವು ಮುಕ್ತ ಕರ್ನಾಟಕ ಮಾಡುವ ತಮ್ಮ ಜೀವಮಾನದ ಆಶಯ ಮತ್ತು ಕಾಳಜಿಯ ಭಾಗವಾಗಿ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿದ್ದರು.

ವೇದಿಕೆಯಲ್ಲಿ ರಾಮಲಿಂಗಾರೆಡ್ಡಿ, ಬಿ.ಎಸ್.ಸುರೇಶ್, ಹೆಚ್.ಕೆ.ಪಾಟೀಲ್ ಸೇರಿ ಹಲವು ಸಚಿವರು ಮತ್ತು ಶಾಸಕರುಗಳು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ