Mysore
23
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕಾವೇರಿ ವಿವಾದ : ಮತ್ತೆ ಸುಪ್ರಿಂಕೋರ್ಟ್​​​ನಲ್ಲಿ ಅರ್ಜಿ ಸಲ್ಲಿಸಲು​ ರಾಜ್ಯ ಸರ್ಕಾರದ ನಿರ್ಧಾರ

ಬೆಂಗಳೂರು : ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶವನ್ನು ಎತ್ತಿ ಹಿಡಿದಿರುವ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪ್ರಾಧಿಕಾರ ಹಾಗೂ ಸುಪ್ರಿಂಕೋರ್ಟ್​​ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹಿರಿಯ ನ್ಯಾಯಾಧೀಶರು, ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ನಡೆಸಿದರು.

ಸಭೆಯಲ್ಲಿ ಕಾನೂನಿನ ಹೋರಾಟ ಮುಂದುವರೆಸುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಇಂದು ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಪ್ರಾಧಿಕಾರ ಹಾಗೂ ಸುಪ್ರಿಂಕೋರ್ಟ್​​ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಿ, ನಿಮ್ಮ ಸಮಸ್ಯೆ ಮನವರಿಕೆ ಮಾಡಿಕೊಡಿ. ಪ್ರಾಧಿಕಾರದ ಆದೇಶ ಪಾಲನೆ ಅಸಾಧ್ಯ ಅಂತ ಹೇಳಿ. ಡ್ಯಾಂಗಳ ಮತ್ತು ಬೆಳೆಯ ಜಮೀನಿನ ಫೋಟೋ ಮತ್ತು ವಿಡಿಯೋಗಳನ್ನು ಕೋರ್ಟ್​ಗೆ ಸಲ್ಲಿಸಿ ಎಂದು ಸಲಹೆ ನೀಡಿದರು.

ಅಲ್ಲದೆ ತಮಿಳುನಾಡಿನ ಡ್ಯಾಂ ನೀರು ಮತ್ತು ಅವರು ಎಷ್ಟು ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನ್ಯಾಯಾಲಯದ ಗಮನಕ್ಕೆ ತನ್ನಿ. ನದಿ ಹುಟ್ಟುವ ರಾಜ್ಯಕ್ಕೆ ಅಧಿಕಾರ ಜಾಸ್ತಿ. ಇದನ್ನು ಪ್ರತಿಪಾದಿಸಿ. ಕೋರ್ಟ್​ನಲ್ಲಿ ಪ್ರಕರಣ ಇರುವಾಗ ಬಹಿರಂಗ ಹೇಳಿಕೆ ಕೊಡಬೇಡಿ. ಸಂಕಷ್ಟ ಸೂತ್ರಕ್ಕೆ ಒತ್ತಾಯಿಸಿ. ಮೇಕೆದಾಟು ಯೋಜನೆ ಬಗ್ಗೆ ಸುಪ್ರೀಂಕೋರ್ಟ್​​ಲ್ಲಿ ಒತ್ತಾಯ ಮಾಡಿ ಎಂದು ತಜ್ಞರು ಸಿಎಂಗೆ ಹೇಳಿದ್ದಾರೆ.

ಕಾವೇರಿ ವಿಚಾರದಲ್ಲಿ ನೀವು ರಾಜಕೀಯ ಫೈಟ್ ಮಾಡಿದರೇ ಜನರಿಗೆ ಉಳಿಗಾಲವಿಲ್ಲ. ಮೂರು ಪಕ್ಷಗಳ ನಾಯಕರು ಒಂದಾಗಿ ಹೋಗಿ. ವಿಪಕ್ಷಗಳು ಮತ್ತು ಸರ್ಕಾರದ ಕೆಲ ಸಚಿವರು ನೀರಾವರಿ ಅಂಕಿ ಅಂಶಗಳನ್ನು ಹೊರಗಡೆ ಹೇಳುವುದು ಬೇಡ ಎಂದು ನ್ಯಾಯಮೂರ್ತಿಗಳು ಹಾಗೂ ವಕೀಲರು ಸಲಹೆ ನೀಡಿದರು.

ನ್ಯಾಯಮೂರ್ತಿಗಳ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಮತ್ತು ಎಜಿ ಶಶಿಕಿರಣ್ ಶೆಟ್ಟಿ ಜೊತೆಗೆ ಪ್ರತ್ಯೇಕ ಸಭೆ ನಡೆಸಿದರು. ಸಭೆಯಲ್ಲಿ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಯಿತು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!