ಲಂಡನ್ : ಒಂದು ವರ್ಷದಲ್ಲಿ 7 ನವಜಾತ ಶಿಶುಗಳನ್ನು ಹತ್ಯೆಗೈದು, ಇನ್ನೂ 6 ಶಿಶುಗಳನ್ನ ಕೊಲ್ಲಲು ಪ್ರಯತ್ನಿಸಿದ್ದ ಬ್ರಿಟಿಷ್ ನರ್ಸ್‌ಗೆ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ (ಕ್ರೌನ್ ಪ್ರಾಸಿಕ್ಯೂಷನ್ ಸೇವೆ) ಜೀವಾವಧಿ ಶಿಕ್ಷೆ ವಿಧಿಸಿದೆ. ಆಕೆ ಇನ್ನು ಸಾಯುವವರೆಗೂ ಜೈಲಿನಲ್ಲೇ ಕೊಳೆಯಬೇಕು, ಇನ್ನೆಂದಿಗೂ ಬಿಡುಗಡೆ ಅನ್ನೋದೇ ಆಕೆಗೆ ಇಲ್ಲ ಎಂದು ಕೋರ್ಟ್ ಹೇಳಿದೆ.
ಲೂಸಿ ಲೆಟ್ಬಿಗೆ ಕ್ರೌನ್ ಕೋರ್ಟ್‌ನಲ್ಲಿ ಲಭ್ಯವಿರುವ ಅತ್ಯಂತ ಕಠಿಣ ಶಿಕ್ಷೆಯನ್ನ ವಿಧಿಸಲಾಗಿದೆ. ಆಕೆ ತನ್ನ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯುತ್ತಾಳೆ ಎಂದು ಮ್ಯಾಂಚೆಸ್ಟರ್ ನ್ಯಾಯಾಧೀಶ ಜೇಮ್ಸ್ ಗಾಸ್ ಹೇಳಿದ್ದಾರೆ.
ಲೂಸಿ ಲೆಟ್ಬಿ ಎಂದು ಗುರುತಿಸಲ್ಪಟ್ಟ ಬ್ರಿಟಿಷ್ ನರ್ಸ್ 2015ರ ಜೂನ್ ರಿಂದ 2016ರ ಜೂನ್ ನಡುವೆ ವಾಯವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಈ ಸರಣಿ ಕೊಲೆಗಳನ್ನ ಮಾಡಿದ್ದಾಳೆ. ಕಳೆದ ಅಕ್ಟೋಬರ್‌ನಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕಳೆದ ಶುಕ್ರವಾರ ಈ ಕುರಿತು ವಿಚಾರಣೆ ನಡೆಸಿದ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಕೋರ್ಟ್ ಶಿಶುಹತ್ಯೆಯ ಆರೋಪಿ ನರ್ಸ್‌ಗೆ ಶಿಕ್ಷೆ ವಿಧಿಸಲು ಮುಂದಾಗಿತ್ತು. ಈಕೆಗೆ ಶಿಕ್ಷೆ ವಿಧಿಸಲು ಭಾರತೀಯ ಮೂಲದ ಮಕ್ಕಳ ವೈದ್ಯರ ಸಲಹೆಗಾರ ಡಾ. ರವಿ ಜಯರಾಮ್ ಸಹಕರಿಸಿದ್ದರು. ಇದರಿಂದಾಗಿ ಭಾರತೀಯ ಮೂಲದ ವೈದ್ಯನಿಗೆ ಭಾರೀ ಪ್ರಸಂಶೆ ವ್ಯಕ್ತವಾಗಿತ್ತು.
ಚಾಲಾಕಿ ಮಹಿಳೆಯಿಂದ ಕೊಲೆಯಾದ ಹೆಚ್ಚಿನ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಏಕೆಂದರೆ ಲೂಸಿ ಲೆಟ್ಬಿ (33) ತನ್ನ ಆರೈಕೆಯಲ್ಲಿದ್ದ ಶಿಶುಗಳಿಗೆ ವಿಷಪೂರಿತ ಚುಚ್ಚುಮದ್ದು ನೀಡುತ್ತಿದ್ದಳು. ಜೊತೆಗೆ ಹಾಲಿನೊಂದಿಗೆ ವಿಷಪೂರಿತ ಲಿಕ್ವಿಡ್ ಬೆರಸಿಕೊಡುತ್ತಿದ್ದಳು. ಜೊತೆಗೆ ಮಕ್ಕಳನ್ನ ಉಸಿರುಗಟ್ಟಿಸಿ, ದೈಹಿಕವಾಗಿ ಹಲ್ಲೆ ನಡೆಸಿ ಕೊಂದಿದ್ದಾಳೆ ಎಂದು ಪ್ರಾಸಿಕ್ಯೂಟರ್‌ಗಳು ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ಗೆ ತಿಳಿಸಿದ್ದರು.
ಈ ಹಿಂದೆ ಆಕೆಯ ನಿವಾಸದಲ್ಲಿ ತನಿಖೆ ನಡೆಸಿದಾಗ ಕೆಲ ಪತ್ರಗಳು ಪತ್ತೆಯಾಗಿದ್ದು, ಅದರಲ್ಲಿ ನಾನು ದೆವ್ವ, ಅವಳನ್ನು ನೋಡಿಕೊಳ್ಳಲು ನಾನು ಯೋಗ್ಯವಲ್ಲದ ಕಾರಣ ಉದ್ದೇಶಪೂರ್ವಕವಾಗಿ ಕೊಂದಿದ್ದೇನೆ. ನಾನು ಕೆಟ್ಟವಳು, ಅದಕ್ಕಾಗಿಯೇ ಹಾಗೆ ಮಾಡಿದ್ದೇನೆ ಮತ್ತು ಇಂದು ನಿಮ್ಮ ಜನ್ಮದಿನ ಆದ್ರೆ ನೀವೇ ಇಲ್ಲ, ಅದಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ ಎಂದು ಬರೆದಿದ್ದ ಪತ್ರಗಳು ಪತ್ತೆಯಾಗಿದ್ದವು.
ಮೊದಲಬಾರಿಗೆ 2015 ರಲ್ಲಿ ನರ್ಸ್ ಕೃತ್ಯ ಬೆಳಕಿಗೆ ಬಂದಿತ್ತು. ಅದೇ ವರ್ಷ ಮೂವರು ಮಕ್ಕಳು ಸಾವನ್ನಪ್ಪಿದ್ದವು. ಕೊನೆಗೆ ಏಪ್ರಿಲ್ 2017 ರಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಟ್ರಸ್ಟ್, ಪೊಲೀಸರು ವೈದ್ಯರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ನಂತರ ಪ್ರಕರಣದ ತನಿಖೆ ಮುಂದುವರಿಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2018 ಮತ್ತು ನವೆಂಬರ್ 2020ರ ನಡುವೆ ನರ್ಸ್ ಅನ್ನು ಮೂರು ಬಾರಿ ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು. ಘಟನೆ ಬೆಳಕಿಗೆ ಬಂದ ನಂತರ ಆಕೆಯನ್ನ ದೇಶದ ಅತ್ಯಂತ ಕೆಟ್ಟ ಬೇಬಿ ಸೀರಿಯಲ್ ಕಿಲ್ಲರ್ ಎಂದು ಪರಿಗಣಿಸಲಾಗಿತ್ತು.