ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡದಲ್ಲಿ ರಾಜಕೀಯ ನಾಯಕರ ಮಾತಿಗೆ ಮಾತು, ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯೆ ಇದೀಗ ರಾಜ್ಯ ರಾಜಕಾರಣದಲ್ಲಿ ರಕ್ತ ರಾಜಕೀಯ ಶುರುವಾಗಿದೆ. ಮೊದಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುರು ಮಾಡಿದ ರಕ್ತ ಹೇಳಿಕೆ ಇದೀಗ ಇನ್ನುಳಿದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ರಕ್ತದ ಬಗ್ಗೆ ಮಾತನಾಡುತ್ತಿದ್ದಾರೆ. ರಕ್ತ ಮಾತಿಗೆ ರಕ್ತಪತ್ರವೊಂದು ಸೇರಿಕೊಂಡಿದೆ.
ಹೌದು,ರಾಜ್ಯದಲ್ಲಿ ರಕ್ತದಲ್ಲಿ ಪತ್ರ ಬರೆಯೋ ರಾಜಕಾರಣ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಯುವ ಮುಖಂಡರೊಬ್ಬರು ರಕ್ತ ಪತ್ರ ಬರೆದಿದ್ದಾರೆ. ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಲಿಂಗಾಯತ ಯುವ ಮುಖಂಡ ಮಂಜುನಾಥ ಯಂಟ್ರುವಿ ಎನ್ನುವರು ರಕ್ತದಲ್ಲೇ ಪತ್ರ ಬರೆದು ತಿರುಗೇಟು ನೀಡಿದ್ದು, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆಲ್ಲಲಿದ್ದಾರೆ ಎಂದು ರಕ್ತದಲ್ಲಿ ಬರೆದ ಪತ್ರದ ಪೋಟೋಗಳು ವೈರಲ್ ಆಗುತ್ತಿವೆ.
ಪತ್ರದಲ್ಲಿ ಮಾನ್ಯ ಜಗದೀಶ ಶೆಟ್ಟರ್ 100ಕ್ಕೆ 100ರಷ್ಟು ವಿಜಯಶಾಲಿ ಆಗುತ್ತಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ, ಈ ಸಾರಿ ಕಾಂಗ್ರೆಸ್ ರಾಜ್ಯದಲ್ಲಿ ಬರುತ್ತದೆ. ಜೈ ಕಾಂಗ್ರೆಸ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಯಡಿಯೂರಪ್ಪನವರ ಹೇಳಿಕೆಗೆ ಟಾಂಗ್ ತಿರುಗೇಟು ಕೊಟ್ಟಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಂಜುನಾಥ ಯಂಟ್ರೂವಿ, ಒಬ್ಬ ಲಿಂಗಾಯತ ನಾಯಕರ ಮೇಲೆ ಲಿಂಗಾಯತ ನಾಯಕರನ್ನೇ ಎತ್ತಿ ಕಟ್ಟಲಾಗುತ್ತಿದೆ. ರಕ್ತದಲ್ಲಿ ಬರೆದು ಕೊಡ್ತೇನೆ ಶೆಟ್ಟರ್ ಸೋಲುವುದು ಖಚಿತ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದ್ರೆ ನಾನು ರಕ್ತದಲ್ಲಿ ಬರೆದುಕೊಡ್ತೀನಿ ಯಾವುದೇ ಕಾರಣಕ್ಕೂ ಶೆಟ್ಟರ್ ಅವರು ಸೋಲುವುದಿಲ್ಲ. ಶೆಟ್ಟರ್ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ರಾಜಕೀಯ ನಾಯಕರ ಮಾತುಗಳನ್ನ ನಾನು ಕೃತಿಯಲ್ಲಿ ತೋರಿಸುತ್ತೇನೆ ಎಂದಿದ್ದಾರೆ.





