ಬೆಂಗಳೂರು : ಶಾಸಕರ ಅಮಾನತು ವಿರೋಧಿಸಿ ಬಿಜೆಪಿ ಶಾಸಕರು ಧರಣಿ ನಡೆಸಬೇಕಾಗಿದ್ದು ಮಹಾತ್ಮ ಗಾಂಧಿ ಪ್ರತಿಮೆಯ ಮುಂದಲ್ಲ, ಬದಲಾಗಿ ನಾಥುರಾಂ ಗೋಡ್ಸೆ ಪ್ರತಿಮೆಯ ಮುಂದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಪರಿಷತ್ ನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ಗಾಂಧಿ ಕೊಂದವರು ಅದೇ ಪ್ರತಿಮೆ ಮುಂದೆ ನ್ಯಾಯ ಕೊಡಿಸಿ ಎನ್ನುವುದು ಎಂತಹ ವಿಪರ್ಯಾಸ ಎಂದು ಕಿಡಿಕಾರಿದರು.
ಬರೀ ಸುಳ್ಳು ಹೇಳುವವರು, ಘರ್ಷಣೆ ಉಂಟು ಮಾಡುವವರು, ಸಮಾಜ ಒಡೆಯುವವರು ಈಗ ಹೋಗಿ ಗಾಂಧಿ ಮುಂದೆ ಕೂತಿದ್ದಾರೆ. ಬಿಜೆಪಿಯವರಿಗೆ ನೈತಿಕತೆ ಇದೆಯಾ? ಎಂದು ಪ್ರಶ್ನಿಸಿದರು.
ವಿಪಕ್ಷ ಟೀಕೆ ಮಾಡುವುದು ಹಾಗೂ ಬಾವಿಗಿಳಿಯುವುದು ಸರ್ಕಾರದ ಗಮನ ಸೆಳೆಯುವುದು ಅವರ ಹಕ್ಕು. ವಿಧಾನಸಭೆಯಲ್ಲಿ ಅವರು ನಡೆದುಕೊಂಡ ರೀತಿಯಿಂದ ಕೆಲವರನ್ನು ಅಮಾನತು ಮಾಡಿದ್ದಾರೆ. ಅನಾಗರಿಕ ವರ್ತನೆ ಮಾಡಿದ್ದಾರೆ. ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಮಾರ್ಷಲ್ ಇಲ್ಲದಿದ್ದರೆ ಏನು ಮಾಡ್ತಿದ್ರೋ ಏನೋ? ಎಂದು ಆತಂಕ ವ್ಯಕ್ತಪಡಿಸಿದರು.
ಅದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ. ಸದನದಲ್ಲಿ ಒಂದು ಶಿಸ್ತು ಇರಬೇಕಲ್ಲ. ಪರಿಷತ್ ಗೆ ಬಿಜೆಪಿಯವರು ಹಾಜರಾಗಬಹುದಿತ್ತು. ಇಲ್ಲೇನೂ ಗಲಾಟೆ ಆಗಿರಲಿಲ್ಲ ಎಂದರು.
ಜೆಡಿಎಸ್ ನವರು ಯಾಕೆ ಬಿಜೆಪಿಯವರ ಜೊತೆಗೆ ಸೇರಿಕೊಂಡರೋ ಗೊತ್ತಿಲ್ಲ. ವಿಧೇಯಕಗಳನ್ನು ಅಂಗೀಕಾರ ಆಗದಂತೆ ಮಾಡೋದಕ್ಕೂ ಜೆಡಿಎಸ್ ಬಿಜೆಪಿ ಜೊತೆಗೆ ಸೇರಿಕೊಳ್ತಾರೆ. ಮರಿತಿಬ್ಬೇಗೌಡ ಟೆಕ್ನಿಕಲಿ ಜೆಡಿಎಸ್, ಆದರೆ ಜೆಡಿಎಸ್ ವಿರೋಧಿ ಅವರು. ಕಾರಣ ಇಲ್ಲದೆಯೇ ಬಿಜೆಪಿ ಹಾಗೂ ಜೆಡಿಎಸ್ ಗೈರಾಗಿದ್ದಾರೆ. ಬೇಜವಾವ್ದಾರಿಗಳು- ಜನ ವಿರೋಧಿಗಳು ಬಿಜೆಪಿ ಜೆಡಿಎಸ್ ನವರು ಎಂದು ಕಿಡಿಕಾರಿದರು.
ಬಜೆಟ್ ಮೇಲೆ ಬೆಳಕು ಚೆಲ್ಲಿದ್ದರೆ ನನಗೆ ಅನುಕೂಲ ಆಗ್ತಾ ಇತ್ತು. ಇಬ್ಬರೇ ಇಬ್ಬರು ಬಿಜೆಪಿಯವರು ಬಜೆಟ್ ಮೇಲೆ ಮಾತನಾಡಿದ್ದಾರೆ.
ಬಜೆಟ್ ಮೇಲೆ ಚರ್ಚೆ ಮಾಡೋದಕ್ಕೆ ಗೈರು ಆಗ್ತಾರೆ. ಪ್ರಜಾಪ್ರಭುತ್ವ ಹಾಗೂ ಜನವಿರೋಧಿಗಳು ಇವರಿಬ್ಬರು ಎಂದು ವಾಗ್ದಾಳಿ ನಡೆಸಿದರು.





