Mysore
20
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬಿಜೆಪಿಯವರು ಯಾವುದೇ ನಾಚಿಕೆ ಇಲ್ಲದೆ ಲೂಟಿ ಮಾಡಿದ್ದಾರೆ : ಪ್ರಿಯಾಂಕಾ ಗಾಂಧಿ

ಮೈಸೂರು : ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆರೋಪಿಸಿದ್ದಾರೆ. ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಹೆಳವರಹುಂಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ರಾಜ್ಯದಲ್ಲಿ ಇದ್ದ ಶೇ.40 ಕಮಿಷನ್ ಸರ್ಕಾರ ನಿಮ್ಮನ್ನು ಲೂಟಿ ಮಾಡಿರುವುದು ಅತ್ಯಂತ ದುಃಖಕರ ಸಂಗತಿ. ಬಿಜೆಪಿಯವರು ಯಾವುದೇ ನಾಚಿಕೆ ಇಲ್ಲದೆ ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿವಿಧ ಹಗರಣಗಳ ಆರೋಪಗಳು, ಗುತ್ತಿಗೆದಾರರ ಆತ್ಮಹತ್ಯೆ ಮತ್ತು ಗುತ್ತಿಗೆದಾರರಿಂದ ಪ್ರಧಾನಿಗೆ ಪತ್ರ ಮತ್ತಿತರ ವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಿಯಾಂಕಾ ಗಾಂಧಿ, ಬಿಜೆಪಿಯಲ್ಲಿ ಅನೇಕ ಮಂದಿ ಶಾಮೀಲಾಗಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಬಿಜೆಪಿ ಸರ್ಕಾರ ದುರಾಡಳಿತ, ಸ್ವಜನ ಪಕ್ಷಪಾತದ ಸರ್ಕಾರವಾಗಿದೆ. ಶಾಸಕರೊಬ್ಬರ ಪುತ್ರನಿಂದ 8 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಇದರ ತನಿಖೆಗೆ ಸಹಕರಿಸದ ಶಾಸಕರು ಪರೇಡ್ ನಡೆಸಿದರು. ರಾಜ್ಯದಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಈ ಹಣವನ್ನು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಿತ್ತು, ಅದರಿಂದ ಜನರಿಗೆ ಅನುಕೂಲವಾಗುತ್ತಿತ್ತು ಎಂದರು.

ಬಿಜೆಪಿ ಸರ್ಕಾರ ರಚನೆಯಾಗಿದ್ದೇ ಜನಾದೇಶದ ವಿರುದ್ಧವಾಗಿ : ಜನರನ್ನು ವಂಚಿಸಿ, ಶಾಸಕರಿಗೆ ಆಮಿಷವೊಡ್ಡಿ ಹಣ ಬಲದಿಂದ ಸರ್ಕಾರ ರಚಿಸಿತು. ಕೇಂದ್ರ ಸರ್ಕಾರದಿಂದ ಬರುವ ಅನುದಾನವೂ ಕಡಿಮೆಯಾಯಿತು. ರಾಜ್ಯ ಸರ್ಕಾರವು ನಿರ್ಲಜ್ಜೆಯಿಂದ ಜನರ ಲೂಟಿ ಮಾಡಿತು. ಗುತ್ತಿಗೆದಾರರು, ಶಾಲಾ ಆಡಳಿತ ಮಂಡಳಿಯವರು ಮೋದಿ ಅವರಿಗೆ ಪತ್ರ ಬರೆದರೂ, ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಕ್ರಮವಹಿಸಲಿಲ್ಲ’ ‘ಪಿಎಸ್ ಐ ಈ ಸರ್ಕಾರ ಕೋವಿಡ್ ಹೆಸರಿನಲ್ಲೂ ಲೂಟಿ ಮಾಡಿತು. ಶಾಲಾ ಮಕ್ಕಳ ಮೊಟ್ಟೆಯನ್ನೂ ಬಿಡಲಿಲ್ಲ’ ಎಂದು ಟೀಕಿಸಿದರು.

2.5 ಲಕ್ಷ ಉದ್ಯೋಗ : ‘ನಿಮ್ಮಲ್ಲಿ ಎಷ್ಟು ಮಂದಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ’ ಎಂದು ಪ್ರಶ್ನಿಸಿದ ಅವರು, ‘ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಷ್ಟೂ ಹುದ್ದೆ ಭರ್ತಿ ಮಾಡಲಾಗುವುದು. ಇದು ನಮ್ಮ ವಚನ’ ಎಂದು ಪ್ರಿಯಾಂಕಾ ಭರವಸೆ ನೀಡಿದರು.
‘ಮೀಸಲಾತಿ ಹೆಸರಿನಲ್ಲೂ ವಂಚನೆ ಮಾಡಿದ್ದಾರೆ. ಮೀಸಲಾತಿ ಹೆಚ್ಚಿಸಿದ್ದಷ್ಟೇ, ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರಿಸುವ ಧೈರ್ಯ ಮಾಡಲಿಲ್ಲ. ಬಿಜೆಪಿಗರು ಮೀಸಲಾತಿ ವಿರೋಧಿಗಳು. ಅಮೂಲ್ ಉತ್ಪನ್ನಗಳ ಮಾರಾಟಕ್ಕಾಗಿ ಹಾಲಿನ ಕೃತಕ ಅಭಾವ ಸೃಷ್ಟಿಸಿದ್ದಾರೆ. 90 ಲಕ್ಷ ಲೀ. ಹಾಲು ಉತ್ಪಾದನೆಯು 70 ಲಕ್ಷ ಲೀ. ಗೆ ಇಳಿಕೆಯಾಗಿದೆ. ಇದು ಸಂಚಲ್ಲವೇ?’ ಎಂದು ಪ್ರಶ್ನಿಸಿದರು.

ದರ್ಶನ್ ಧ್ರುವನಾರಾಯಣ ಜೊತೆ ಮಾತು‌ : ಇಂದು ನಡೆದ ಚುನಾವಣಾ ಪ್ರಚಾರ ಸಭೆ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ AICC ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರಿಗೆ ಶಾಸಕ ತನ್ವೀರ್ ಸೇಠ್ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರು ದಿ.ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರನ್ನು ಪರಿಚಯಿಸಿದರು. ಪ್ರಿಯಾಂಕಾ ಅವರು ದರ್ಶನ್ ಅವರ ಯೋಗಕ್ಷೇಮ ವಿಚಾರಿಸಿ ಕೆಲಕಾಲ ಮಾತನಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ, ಚಾಮರಾಜ ಕ್ಷೇತ್ರದ ಅಭ್ಯರ್ಥಿ ಕೆ.ಹರೀಶ್ ಗೌಡ, ನಂಜನಗೂಡು ಕ್ಷೇತ್ರದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಕಾಗಲವಾಡಿ ಶಿವಣ್ಣ, ಸುನಿಲ್ ಬೋಸ್, ಸುನಿತಾ ವೀರಪ್ಪಗೌಡ, ವರುಣ, ತಿ.ನರಸೀಪುರ, ಚಾಮುಂಡೇಶ್ವರಿ, ನಂಜನಗೂಡು, ಮಂಡ್ಯದ ಮಳವಳ್ಳಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರು, ಬೆಂಬಲಿಗರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ