Mysore
15
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಬಿಜೆಪಿ ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟರನ್ನು ದುರುದ್ದೇಶದಿಂದ ವಂಚಿಸುತ್ತಿದೆ : ರಣದೀಪ್‍ಸಿಂಗ್ ಸುರ್ಜೇವಾಲ

ಬೆಂಗಳೂರು- ಮಹಾಭಾರತದಲ್ಲಿ ಶಕುನಿಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಗೊಂದಲದ ನಿರ್ಧಾರಗಳ ಮುಖಾಂತರ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ಬೋಮ್ಮಾಯಿ ಅವರ 420 ಸರ್ಕಾರ ಮೀಸಲಾತಿ ವಿಷಯದಲ್ಲಿ ಲಿಂಗಾಯಿತ್, ಒಕ್ಕಲಿಗ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟರನ್ನು ದುರುದ್ದೇಶದಿಂದ ವಂಚಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲ ಕಿಡಿಕಾರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ್ಯ ಭಾರತದ 75 ವರ್ಷದಲ್ಲಿ ಯಾವುದೇ ರಾಜ್ಯ ಸರ್ಕಾರ 90 ದಿನದಲ್ಲಿ ಮೂರು ಬಾರಿ ಮೀಸಲಾತಿಯನ್ನು ಬದಲಾವಣೆ, ಪರಿಷ್ಕರಣೆ ಮಾಡಿಲ್ಲ. ಕಾರ್ನಾಕಟದಲ್ಲಿ ಬಿಜೆಪಿ ಸರ್ಕಾರ ಆ ಕೆಲಸ ಮಾಡಿದೆ, ಒಂದೊಂದು ಜಾತಿಯನ್ನು ಮತ್ತೊಂದು ಜಾತಿ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಬಿಜೆಪಿಯ ಭಾರತೀಯ ಜನತಾ ಪಕ್ಷ ಎಂಬ ಹೆಸರನ್ನು ಬಿಟ್ರಯಲ್ ಜನತಾ ಪಾರ್ಟಿ ಎಂದು ಬದಲಾವಣೆ ಮಾಡುವುದು ಸೂಕ್ತವಾಗಿದೆ. ತನ್ನ ಭ್ರಷ್ಟಚಾರವನ್ನು ಮರೆ ಮಾಚಲು ಮೀಸಲಾತಿ ವಿಷಯದಲ್ಲಿ ಪರಸ್ಪರ ದ್ವೇಷ ಹಾಗೂ ವೈರತ್ವ ಸೃಷ್ಟಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ರಾಹುಲ್‍ಗಾಂ ಭಾರತ್ ಜೋಡೋ ಯಾತ್ರೆಯಲ್ಲಿ ವಿಷಯ ಪ್ರಸ್ತಾಪಿಸುವವರೆಗೂ ನ್ಯಾಯಮೂರ್ತಿ ನಾಗಮೋಹನ್‍ದಾಸ್ ವರದಿಯನ್ನು ನಾಲ್ಕು ವರ್ಷದಿಂದ ಜಾರಿ ಮಾಡಲಿಲ್ಲ. ವಿಧಾನ ಮಂಡಲದ ಕೊನೆಯ ಅವೇಶನದಲ್ಲಿ ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. 2022ರ ಡಿಸೆಂಬರ್ 26ರಂದು ನಿರ್ಣಯ ಕೈಗೊಂಡು ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಮೀಸಲು ಪ್ರಮಾಣ ಶೇ.50ರ ಮಿತಿ ಗಡಿದಾಟಬಾರದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಲಾಗಿದೆ. ಮೀಸಲಾತಿ ಹೆಚ್ಚಳ ಮಾಡಿದರೆ ಅದನ್ನು ಸಂವಿಧಾನದ 9ನೆ ಪರಿಚ್ಛೇಧಕ್ಕೆ ಸೇರಿಸಿದಾಗ ಮಾತ್ರ ಊರ್ಜಿತವಾಗುತ್ತದೆ, ರಾಜ್ಯ ಸರ್ಕಾರ ಮೂರು ತಿಂಗಳಿನಿಂದ ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿಲ್ಲ ಎಂದು ಹೇಳಿದರು.
2022ರ ಡಿಸೆಂಬರ್ 29ರಂದು ಎರಡನೇ ಬಾರಿ 3 ಎ ನಲ್ಲಿದ್ದ ಒಕ್ಕಲಿಗರ ಸಮುದಾಯದ ಮೀಸಲಾತಿಯನ್ನು 2 ಸಿ ಎಂದು, 3 ಬಿ ನಲ್ಲಿದ್ದ ಲಿಂಗಾಯಿತ ಹಾಗೂ ಇತರ ಜಾತಿಗಳನ್ನು 2 ಡಿ ಎಂದು ಮರು ಪರಿಷ್ಕರಣೆ ಮಾಡಲಾಗಿದೆ. ಇದನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಗಿದೆ. ವಿಷಯ ನ್ಯಾಯಾಲಯದಲ್ಲಿ ಇರುವಾಗ ಮತ್ತೊಮ್ಮೆ ಮೀಸಲಾತಿಯನ್ನು ಪುನರ್ ರಚನೆ ಮಾಡಲಾಗಿದೆ.
ಚುನಾವಣೆಗೆ ಹೋಗುವ ನಾಲ್ಕೈದು ದಿನಗಳ ಮೊದಲು 2023ರ ಮಾರ್ಚ್ 24ರಂದು ಸಂಪುಟ ಸಭೆಯಲ್ಲಿ ಎಲ್ಲಾ ಮೀಸಲಾತಿಯನ್ನು ಮರು ಪರಿಷ್ಕರಿಸಲಾಗಿದೆ. ಇದೊಂದು ಲಜ್ಜೆಗೆಟ್ಟ ನಿರ್ಧಾರವಾಗಿದೆ. ಪಂಚಮಸಾಲಿ ಹಾಗೂ ಇತರ ಲಿಂಗಾಯಿತ ಸಮುದಾಯಗಳು ಶೇ.15ರಷ್ಟು ಮೀಸಲಾತಿಗೆ ಬೇಡಿಕೆ ಸಲ್ಲಿಸಿದ್ದವು, ಶೇ.2ರಷ್ಟು ಮಾತ್ರ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ. ಪರಿಶಿಷ್ಠರ ಮೀಸಲು ಪರಿಷ್ಕರಣೆಯೂ ಗೊಂದಲಕಾರಿಯಾಗಿದೆ. ಉದ್ದೇಶಪೂರ್ವಕವಾಗಿಯೇ ಗೊಂದಲ ಸೃಷ್ಟಿಸಿ ಕನ್ನಡಿಗರ ಜಾಣ್ಮೆಯನ್ನು ಅಪಮಾನ ಮಾಡುವ ಯತ್ನ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೋಮ್ಮಾಯಿ ಸರ್ಕಾರ ಮಾಡಿರುವ ಮೀಸಲಾತಿ ಹೆಚ್ಚಳವನ್ನು ತಿರಸ್ಕರಿಸಿದೆ. ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕರಣೆಯಿಂದ ಯಾರಿಗೂ ಲಾಭವಾಗುವುದಿಲ್ಲ. ಬಿಜೆಪಿ ಜಾಹಿರಾತಿನಲ್ಲಿ ಸಂಪುಟ ಸಭೆಯ ನಿರ್ಣಯವನ್ನು ಬಳಸಿಕೊಳ್ಳಬಹುದಷ್ಟೆ ಎಂದರು.
ಮುಸ್ಲಿಂರನ್ನು ಇಡಬ್ಲ್ಯೂಎಸ್ ಖೋಟಾಗೆ ಸ್ಥಳಾಂತರಿಸುವುದಾಗಿ ಹೇಳಲಾಗಿದೆ, ಇಡಬ್ಲ್ಯೂಎಸ್ ಸಂಪೂರ್ಣವಾಗಿ ಆರ್ಥಿಕತೆ ಆಧಾರದ ಮೇಲೆ ನೀಡುವುದಾಗಿದೆ, ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಅದಕ್ಕೆ ಬೇರೆಯವರು ಸೇರ್ಪಡೆಯಾಗಲು ಸಾಧ್ಯವಿಲ್ಲ. 420 ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ಯತ್ನ ಮಾತ್ರ ಮಾಡಿದೆ ಎಂದು ಕಿಡಿಕಾರಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!