ಬೆಳಗಾವಿ : ಕಳೆದ ಮೂರು ವರ್ಷಗಳಿಂದಲೂ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸದ ಬಿಜೆಪಿಯವರು ಈಗ ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಯೋಜನೆಯಿಂದ ಜನ ಖುಷಿಯಲ್ಲಿದ್ದಾರೆ. ಇದನ್ನು ನೋಡಿ ಸಹಿಸಲಾಗದ ಬಿಜೆಪಿಯವರು ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಂಚಖಾತ್ರಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಶಕ್ತಿ ಯೋಜನೆಯಿಂದ ಮಹಿಳೆಯರು ಖುಷಿಯಾಗಿದ್ದಾರೆ. ಇದೇ ತಿಂಗಳಲ್ಲಿ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಉದ್ಘಾಟಿಸಲಾಗುತ್ತಿದೆ. ಇದನ್ನೆಲ್ಲ ನೋಡಿ ಬಿಜೆಪಿಯವರಿಗೆ ಹೊಟ್ಟೆ ಉರಿ ತಡೆದುಕೊಳ್ಳಲು ಆಗುತ್ತಿಲ್ಲ ಎಂದರು.
ಗೃಹಲಕ್ಷ್ಮಿ ದೇಶದಲ್ಲೇ ಅತ್ಯಂತ ದೊಡ್ಡ ಯೋಜನೆಯಾಗಿದೆ. ರಾಜ್ಯದ 1.28 ಕೋಟಿ ಮಹಿಳೆಯರು ಇದರ ಫಲಾನುಭವಿಗಳಾಗಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಗೆ ಸೋನಿಯಾ ಗಾಂ ಅವರನ್ನು ಆಹ್ವಾನಿಸಲಾಗಿದೆ ಎಂದರು.
ಈ ಹಿಂದೆ ಭ್ರಷ್ಟಾಚಾರ, ಧರ್ಮ ರಾಜಕಾರಣ, ಲಂಚಗುಳಿತನದಿಂದ ರಾಜ್ಯವನ್ನು ಹಾಳು ಮಾಡಿದ್ದಾರೆ. ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡವರಿಗೆ ನಮ್ಮ ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
ನಾವು ಯಾವುದೇ ಗುತ್ತಿಗೆದಾರರಿಗೆ ತೊಂದರೆ ನೀಡುವ ಉದ್ದೇಶ ಹೊಂದಿಲ್ಲ. ಕಾಮಗಾರಿಗಳ ನೈಜ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಬಾಕಿ ಬಿಲ್ ಪಾವತಿ ಮಾಡುತ್ತೇವೆ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಇಂದು ಹೇಳಿಕೆ ನೀಡಿ ಯಾರು ಕಮೀಷನ್ ಕೇಳುತ್ತಿಲ್ಲ ಎಂದಿದ್ದಾರೆ. ಬಿಜೆಪಿಯವರಿಗೆ ಸಂಸತ್ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯವಿದ್ದು, ಅದಕ್ಕಾಗಿ ಬಾಯಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದಷ್ಟೇ ನಮ್ಮ ಸರ್ಕಾರ ಅಕಾರಕ್ಕೆ ಬಂದಿದೆ. ಒಂದೂ ಕಾಮಗಾರಿಯನ್ನು ಗುತ್ತಿಗೆ ನೀಡಿಲ್ಲ. ಬಾಕಿ ಬಿಲ್‍ಗಳ ಪಾವತಿ ಮಾಡಬೇಕು. ಅದರಲ್ಲಿ ಎರಡು ಮಾತಿಲ್ಲ. ಅದಕ್ಕೂ ಮೊದಲು ತನಿಖೆ ಪೂರ್ಣಗೊಳ್ಳಬೇಕಿದೆ. ಈ ನಡುವೆ ಕಮೀಷನ್ ಕೇಳಲಾಗುತ್ತಿದೆ ಎಂಬ ಆರೋಪ ಸುಳ್ಳು ಎಂದರು.
ಸಂಸತ್‍ನಲ್ಲಿ ರಾಹುಲ್ ಗಾಂ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆಂಬ ಕುರಿತಂತೆ ತಮಗೆ ಮಾಹಿತಿ ಇಲ್ಲ. ಆ ಕುರಿತು ಸ್ಪೀಕರ್ ಮುಂದೆ ಅರ್ಜಿ ಬಾಕಿ ಇದೆ. ಈ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ವಿಕಲಚೇತನ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಸಿಎಂ ಭರವಸೆ ನೀಡಿದರು