ರಾಮನಗರ : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಕನಕಪುರ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಂದಾಯ ಸಚಿವ ಆರ್ ಅಶೋಕ್ ಸ್ಪರ್ಧಿಸುತ್ತಿದ್ದಾರೆ. ಹೈವೋಲ್ಟೇಜ್ ಕ್ಷೇತ್ರ ಎನಿಸಿರುವ ಕನಕಪುರ ಕ್ಷೇತ್ರದಲ್ಲಿಂದು ಆರ್ ಅಶೋಕ್ ಪ್ರಚಾರ ನಡೆಸಬೇಕಿತ್ತು. ಆದರೆ ಪ್ರಚಾರ ದಿಢೀರ್ ರದ್ದಾಗಿದೆ.
ಕನಕಪುರದಲ್ಲಿ ಡಿಕೆ ಶಿವಕುಮಾರ್ ಪರ ಡಿಕೆ ಸುರೇಶ್ ಪ್ರಚಾರ ನಡೆಸಲಿದ್ದು ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಒಂದೇ ಮಾರ್ಗದಲ್ಲಿ ಪ್ರಚಾರ ಮಾಡಿದರೆ ಘರ್ಷಣೆ ಎದುರಾಗುವ ಹಿನ್ನೆಲೆ ಪ್ರಚಾರ ರದ್ದು ಮಾಡಲಾಗಿದೆ.
ಬಿಜೆಪಿ ಅಭ್ಯರ್ಥಿ ಆರ್ ಅಶೋಕ್, ಕನಕಪುರ ಕ್ಷೇತ್ರದ ಅರಳಾಳು ಸಂದ್ರಗೇಟ್, ಚಿಕ್ಕಮುದವಾಡಿ, ಚಿಕ್ಕೇನಹಳ್ಳಿ ವಾಡೇದೊಡ್ಡಿ ಮುಂತಾದೆಡೆ ಪ್ರಚಾರ ಮಾಡಬೇಕಿತ್ತು.
ಆದರೆ ಇದೇ ಮಾರ್ಗದಲ್ಲಿ ಸಂಸದ ಡಿಕೆ ಸುರೇಶ್ ಅವರು ಡಿಕೆ ಶಿವಕುಮಾರ್ ಪರವಾಗಿ ಪ್ರಚಾರ ನಡೆಸುವ ಹಿನ್ನೆಲೆ ಆಶೋಕ್ ಪ್ರಚಾರಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಘರ್ಷಣೆ ನಡೆಯುವ ಸಾಧ್ಯತೆ ಹಿನ್ನೆಲೆ ಪೊಲೀಸರಿಂದ ಅನುಮತಿ ನಿರಾಕರಿಸಲಾಗಿದೆ. ಸದ್ಯ ಈಗ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಪರವಾಗಿ ಡಿಕೆ ಸುರೇಶ್ ರೋಡ್ ಶೋ ನಡೆಸುತ್ತಿದ್ದಾರೆ.





