ಹಲಗೂರು : ಇಲ್ಲಿಗೆ ಸಮೀಪದ ಅಂತರವಳ್ಳಿ ಗ್ರಾಮದಲ್ಲಿ ಎರಡು ಬೈಕ್‌ಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ತೀವ್ರ ಗಾಯಗೊಂಡು, ನಂತರ ಚಿಕಿತ್ಸೆ ಫಲಿಸದೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಅಂತರವಳ್ಳಿ ಗ್ರಾಮದ ಕುಮಾರಸ್ವಾಮಿ ಅವರ ಪುತ್ರ ಎ.ಕೆ.ಶಿವಪ್ಪ (32) ಮೃತ ಯುವಕ.
ಶನಿವಾರ ಬೆಳಿಗ್ಗೆ ಕಾರ್ಯನಿಮಿತ್ತ ಹಲಗೂರಿಗೆ ಹೋಗಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಇಲ್ಲಿನ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಎದುರು ಹುಸ್ಕೂರು ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಡಿಕ್ಕಿ ಹೊಡೆದ ಬೈಕ್ ಸವಾರ ತನ್ನ ಬೈಕ್‌ನೊಂದಿಗೆ ಪರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡ ಶಿವಪ್ಪ ಅವರಿಗೆ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





