Mysore
20
overcast clouds
Light
Dark

14 ಬಾರಿ ಅಂಬಾರಿ ಹೊತ್ತ ‘ಬಲರಾಮ’ ಅಸ್ವಸ್ಥ

ಹುಣಸೂರು : ಮೈಸೂರು ದಸರೆಯಲ್ಲಿ 14 ಬಾರಿ ಅಂಬಾರಿ ಹೊತ್ತಿರುವ ಬಲರಾಮ ತೀವ್ರ ಅಸ್ವಸ್ಥಗೊಂಡಿದ್ದು, ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

ಸುಮಾರು 67 ವರ್ಷದ ಬಲರಾಮನಿಗೆ ಹತ್ತು ದಿನಗಳಿಂದ ಬಾಯಿಯಲ್ಲಿಹುಣ್ಣಾಗಿ ನಿತ್ರಾಣಗೊಂಡಿದೆ. ಇದು ಟಿಬಿ ಇರಬಹುದೆಂದು ಶಂಕಿಸಲಾಗಿದೆ. ಆಹಾರ ಸೇವಿಸಲು, ನೀರು ಕುಡಿಯಲು ಆಗದಂತಹ ಸ್ಥಿತಿ ಉಂಟಾಗಿದ್ದರಿಂದ ನಾಗರಹೊಳೆ ಪಶುವೈದ್ಯ ಡಾ.ರಮೇಶ್‌ ಸ್ಥಳದಲ್ಲೇ ಠಿಕಾಣಿ ಹೂಡಿ ಚಿಕಿತ್ಸೆ ನೀಡುತ್ತಿದ್ದಾರೆ.

ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್‌ ಚಿಕ್ಕನರಗುಂದ ಮಾರ್ಗದರ್ಶನದಲ್ಲಿಆರ್‌ಎಫ್‌ಒ ರತ್ನಾಕರ್‌, ಡಿಆರ್‌ಎಫ್‌ಒ ಸಿದ್ದರಾಜು ನೇತೃತ್ವದ ತಂಡ ಹಾಗೂ ಬಲರಾಮನ ಮಾವುತ ತಿಮ್ಮ, ಕಾವಾಡಿ ಮಂಜನಾಥ ಹಾಗೂ ಸಿಬ್ಬಂದಿ ಸ್ಥಳದಲ್ಲೇ ಇದ್ದು, ಬಲರಾಮನ ಆರೈಕೆಯಲ್ಲಿತೊಡಗಿಸಿಕೊಂಡಿದ್ದಾರೆ.

ಎಂಡೋಸ್ಕೋಪಿ : ತೀವ್ರ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಪಶು ವೈದ್ಯ ಡಾ.ಚೆಟ್ಟಿಯಪ್ಪ, ಡಾ.ಮದನ್‌, ಡಾ.ರಮೇಶ್‌ ತಂಡ ಬುಧವಾರ ಪರಿಶೀಲಿಸಿತು. ಅಲ್ಲದೇ ಮೈಸೂರು ಅರಮನೆ ರಾಜವಂಶಸ್ಥ ಶೃತಿ ಕೀರ್ತಿದೇವಿ ಅವರ ನೆರವಿನಿಂದ ಪೋರ್ಟಬಲ್‌ ಯಂತ್ರದ ಮೂಲಕ ಎಂಡೋಸ್ಕೋಪಿ ಮಾಡಲಾಗಿದೆ. ಗುರುವಾರ ವರದಿ ಬರಲಿದ್ದು, ನೈಜ ಕಾಯಿಲೆ ಏನೆಂದು ತಿಳಿಯಬಹುದು ಎಂದು ಪಶು ವೈದ್ಯರು ತಿಳಿಸಿದ್ದಾರೆ.

ಪಶುವೈದ್ಯರು ಏನಂತಾರೆ ? : ಬಲರಾಮ ಹತ್ತು ದಿನಗಳಿಂದ ತೀವ್ರ ಅಸ್ವಸ್ಥಗೊಂಡಿದ್ದು, ಪಶು ವೈದ್ಯರು ತೀವ್ರ ನಿಗಾವಹಿಸಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಆನೆ ಚೇತರಿಸಿಕೊಳ್ಳುತ್ತಿದೆ. ಗಟ್ಟಿ ಆಹಾರ ಸೇವಿಸಲಾಗದ ಬಲರಾಮನಿಗೆ ರಾಗಿ ಗಂಜಿ, ರಾಗಿ ಹಿಟ್ಟು, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣಿನಂತಹ ಮೆದು ಆಹಾರ ನೀಡಲಾಗುತ್ತಿದೆ. ಎಂಡೋಸ್ಕೋಪಿ ಸಹ ಮಾಡಲಾಗಿದ್ದು, ಲ್ಯಾಬ್‌ನಿಂದ ವರದಿ ಬಂದ ನಂತರ ಕಾಯಿಲೆ ತಿಳಿದು ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ